ಸಾರಾಂಶ
ಯಲಬುರ್ಗಾ:
ಕ್ಷೇತ್ರದ ತಳಕಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ವಿಶ್ವ ದರ್ಜೆಯ ಕೇಂದ್ರವನ್ನಾಗಿ ಮಾಡುವ ಮೂಲಕ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ಆಲೋಚನೆ ಹೊಂದಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮಂಗಳವಾರ ನೂತನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡ ಒಡಿಸ್ಸಾದ ವಿಶ್ವ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದೆ. ಅದೇ ಮಾದರಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ೨೫ ಎಕರೆಯಲ್ಲಿ ₹೨೫೦ ಕೋಟಿ ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ-೨ ತಲೆ ಎತ್ತಲಿದೆ. ಇದರಲ್ಲಿ ೬೦ ಟ್ರೇಡ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಕೇಂದ್ರದಲ್ಲಿ ತರಬೇತಿ ಪಡೆದವರು ದೇಶ, ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.ಬಡ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಚಿಕ್ಕಮ್ಯಾಗೇರಿಯಲ್ಲಿ ₹೨೨ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಡಾ. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ. ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು ಎಂದ ಅವರು, ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆ ಜಾರಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಯೋಜನೆ ವಿಳಂಬವಾಗಲಿದೆ. ಇದರ ಭಾಗವಾಗಿ ಕ್ಷೇತ್ರದ ೨೪ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಅಲ್ಲದೆ ಹೊಸದಾಗಿ ೩೨ ಕೆರೆಗಳಿಗೆ ಮುಂದಿನ ದಿನಗಳಲ್ಲಿ ನೀರು ತುಂಬಿಸುವ ಕೆಲಸ ಪ್ರಾರಂಭಿಸಲಾಗುವುದು. ಅಂದಿನ ಸಿಎಂ ಜಗದೀಶ ಶೆಟ್ಟರ್ ಬೇವೂರಿನಲ್ಲಿ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿ, ಪ್ರಚಾರ ಪಡೆದುಕೊಂಡರು. ನೀರಾವರಿ ಆಯ್ತಾ? ನೀರು ಬಂತಾ? ಅದು ಸುಳ್ಳು ಅಡಿಗಲ್ಲು ಎಂದು ಜರಿದರು.
ನ್ಯಾಯಾಲಯದಲ್ಲಿ ವ್ಯಾಜ್ಯ ಬಗೆಹರಿದ ಬಳಿಕ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ ಅಂದಾಜು ₹೮೦೦೦ ಕೋಟಿ ಅನುದಾನ ಮೀಸಲಿರಿದೆ. ಯಾರೇ ಆಗಲಿ ಕಾನೂನು, ತಾಂತ್ರಿಕ ಮತ್ತು ಆರ್ಥಿಕತೆ ಬಗ್ಗೆ ತಿಳಿದು ಮಾತಾಡಬೇಕು ಎಂದ ಅವರು, ಗುನ್ನಾಳ ಡಿಪ್ಲೊಮಾ ಕಾಲೇಜು, ತಳಕಲ್ ಎಂಜಿನಿಯರಿಂಗ್, ಪಿಜಿ ಸೆಂಟರ್‌ಗೆ ವಸತಿ ನಿಲಯ ನಿರ್ಮಾಣವಾಗಲಿದೆ. ಇದು ಎರಡು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಎಸಿ ಕ್ಯಾ. ಮಹೇಶ ಮಾಲಗತ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಮಾತನಾಡಿದರು. ಈ ವೇಳೆ ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ, ಟಿಎಚ್‌ಒ ನೇತ್ರಾವತಿ ಹಿರೇಮಠ, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ರೇವಣಪ್ಪ ಸಂಗಟಿ, ಶರಣಪ್ಪ ಗಾಂಜಿ, ಹಂಪಯ್ಯಸ್ವಾಮಿ ಹಿರೇಮಠ, ಸುಧೀರ ಕೊರ್ಲಹಳ್ಳಿ, ಡಾ. ಶಿವನಗೌಡ ದಾನರಡ್ಡಿ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ಜಕ್ಕಲಿ, ಮಲ್ಲೇಶಗೌಡ ಮಾಲಿಪಾಟೀಲ್, ಗವಿಸಿದ್ದಪ್ಪ ಚಂಡೂರ, ಈಶ್ವರ ಅಟಮಾಳಗಿ, ಅಶೋಕ ತೋಟದ, ಬಸವರಾಜ ಈಳಿಗೇರ್, ಗಿರಿಜಾ ಸಂಗಟಿ, ಸಾವಿತ್ರಿ ಗೊಲ್ಲರ್, ಶರಣಗೌಡ ಬಸಾಪುರ, ಪುನೀತ ಕೊಪ್ಪಳ, ಸಿದ್ದು ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.
ಶಿಷ್ಟಾಚಾರ ಉಲ್ಲಂಘನೆ ಆರೋಪತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ ಮತ್ತು ಪಿಎಚ್‌ಸಿಗೆ ಶಂಕುಸ್ಥಾಪನೆ ಮಾಡುವ ಶಿಲಾನ್ಯಾಸ ಫಲಕದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ ಆರೋಪಿಸಿದರು.
ಕಾರ್ಯಕ್ರಮ ಉದ್ಘಾಟಕರಾಗಿ ಶಾಸಕ ಬಸವರಾಜ ರಾಯರಡ್ಡಿ ಬರುವ ಮುಂಚೆಯೇ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಮತ್ತು ಗ್ರಾಪಂ ಅಧ್ಯಕ್ಷ ಶರಣಕುಮಾರ ನಡುವೆ ತೀವ್ರ ವಾಗ್ವಾದ ನಡೆಯಿತು. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಮಾತಾಡಬೇಕು. ಇಲ್ಲಿ ಅನವಶ್ಯಕವಾಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ ಕಾನೂನು ಪ್ರಕಾರ ಬಂಧಿಸಬೇಕಾಗುತ್ತದೆ. ಮದ್ಯ ಸೇವನೆ ಮಾಡಿ ಗಲಾಟೆ ಮಾಡಿದರೆ ಸರಿ ಇರಲ್ಲ ಎಂದು ಗ್ರಾಪಂ ಅಧ್ಯಕ್ಷನನ್ನು ಎಳೆದೊಯ್ದು ಪೊಲೀಸ್ ಕಾರಿನಲ್ಲಿ ಕೂಡಿಸಿದ್ದರು. ನಾನು ಮದ್ಯ ಸೇವನೆ ಮಾಡಿದ್ದೇ ನಿಜವಾಗಿದ್ದರೆ ವೈದ್ಯರನ್ನು ಕರೆದು ತಪಾಸಣೆ ನಡೆಸಿ ಎಂದು ಅಧ್ಯಕ್ಷರು ಕಾರು ಇಳಿದು ವಾಪಸ್ ವೇದಿಕೆ ಹತ್ತಿರ ಬಂದರು. ನನ್ನ ಬೇಡಿಕೆ ಕಾನೂನು ಪ್ರಕಾರವೇ ಇದ್ದು, ನೀವು ಬಂಧನ ಮಾಡಿದರೆ ನಾನು ಹೆದುರುವುದಿಲ್ಲ. ನಾನೂ ಕಾನೂನು ಪ್ರಕಾರವೇ ಕೇಳುತ್ತಿದ್ದೇನೆ ಎಂದರು. ಶಾಸಕ ಬಸವರಾಜ ರಾಯರಡ್ಡಿ ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು. ಇದು ಕಾರ್ಯಕ್ರಮ ನಡೆಯುವ ಮುಂಚೆಯೇ ನಡೆದ ಹೈಡ್ರಾಮಾವಾಗಿತ್ತು.