ಇಲ್ಲಿನ ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ಬೋಧನಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಂಸ್ಥೆಯ ಶಿಕ್ಷಕ ವೃಂದದವರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.

ಬ್ರಹ್ಮಾವರ: ಇಲ್ಲಿನ ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ಬೋಧನಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಂಸ್ಥೆಯ ಶಿಕ್ಷಕ ವೃಂದದವರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಮಾನಸಿಕ ಆರೋಗ್ಯ ಬಹಳ ಮುಖ್ಯವಾಗಿದೆ. ಶಿಕ್ಷಕರು ಕಾರ್ಯಾಗಾರದಲ್ಲಿ ಕಲಿತ ವಿಷಯಗಳನ್ನು ಅನುಸರಿಸಿ ತರಗತಿಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ಇಂದು ವಿದ್ಯಾರ್ಥಿಗಳ ಆತ್ಮಹತ್ಯೆ, ಅವರಲ್ಲಿ ಹೆಚ್ಚುತ್ತಿರುವ ಒತ್ತಡ, ಏಕಾಂತ ಮತ್ತು ಖಿನ್ನತೆ ಇದಕ್ಕೆಲ್ಲಾ ಕಾರಣ ಏನೆಂಬುದರ ಕುರಿತು ಶಿಕ್ಷಕರು ಯೋಚಿಸಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಶಿಕ್ಷಕರು ಗಮನ ನೀಡಬೇಕು ಎಂದರು. ಕಾರ್ಯಾಗಾರಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಎಸ್.ಎಮ್.ಎಸ್. ಶಾಲೆಯ ಪ್ರಾಂಶುಪಾಲೆ ಅಭಿಲಾಷ ಎಸ್. ಮತ್ತು ಮೂಡುಬಿದಿರೆ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ಶೈಕ್ಷಣಿಕ ನಿರ್ದೇಶಕಿ ಶೈಲಜಾ ಪಿ ಆಗಮಿಸಿದ್ದರು. ಅವರು ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವುದರ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.

ಚಟುವಟಿಕೆ ಆಧಾರಿತ ಕಾರ್ಯಾಗಾರದಲ್ಲಿ ಮಕ್ಕಳ ಸಾಮಾನ್ಯ ಭಾವಾನಾತ್ಮಕ ಮತ್ತು ವರ್ತನಾ ಸಮಸ್ಯೆಗಳು ಅದರ ಆರಂಭಿಕ ಲಕ್ಷಣ ಮತ್ತು ಸೂಚನೆಗಳನ್ನು ಪತ್ತೆಹಚ್ಚುವಿಕೆ ಅದನ್ನು ಎದುರಿಸುವ ತಂತ್ರ ಬೋಧನೆಯಲ್ಲಿ ಅಳವಡಿಸುವುದರ ಕುರಿತು ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳ ಭಾವನಾತ್ಮಕ, ಸಾಮಾಜಿಕ, ವರ್ತನಾ ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ವಿಧಾನಗಳ ಕುರಿತು ಶಿಕ್ಷಕರು ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು.