ಸಾರಾಂಶ
ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೌಶಲ್ಯ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಆಯ್ಕೆಯಾದ ೨೧ ಜನರನ್ನು ಸಂಘದ ಸದಸ್ಯರನ್ನಾಗಿ ಮಾಡಿ ಒಂದು ಸಂಘ ರಚಿಸಿಕೊಡಲಾಗುತ್ತದೆ. ನಂತರ ಇವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ನೀಡಲಾಗುವುದು
ಶಿರಸಿ:
ತಾಲೂಕಿನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ದನಗನಳ್ಳಿ ಕೆರೆಯಲ್ಲಿ ಮೀನುಗಾರಿಕೆ ಕೌಶಲ್ಯ ಪರೀಕ್ಷೆ ಶುಕ್ರವಾರ ನಡೆಸಲಾಯಿತು.ಈ ಪರೀಕ್ಷೆಯಲ್ಲಿ ತಾಲೂಕಿನಾದ್ಯಂತ ೫೦ಕ್ಕೂ ಹೆಚ್ಚಿನ ಮೀನುಗಾರಿಕೆಯಲ್ಲಿ ಆಸಕ್ತಿಯಿದ್ದವರು ಪಾಲ್ಗೊಂಡಿದ್ದರು. ೧೦ಕ್ಕೂ ಹೆಚ್ಚಿನ ಮಹಿಳೆಯರು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪರೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಈಜು, ಬಲೆ ಬೀಸುವುದು, ಬಲೆ ಹೆಣೆಯುವುದು, ಮೀನು ಸ್ವಚ್ಛಗೊಳಿಸುವುದು, ದೋಣಿ ಚಲಾಯಿಸುವುದು ಹಾಗೂ ಮೀನು ಮಾರಾಟದ ಬಗ್ಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ೨೪ ಜನರು ಪಾಸಾಗಿದ್ದು, ಇವರಲ್ಲಿ ೨೧ ಜನರನ್ನು ನಿಯೋಜಿತ ಪುಣ್ಯಕೋಟಿ ಮೀನುಗಾರರ ಸಹಕಾರಿ ಸಂಘದ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.ಈ ವೇಳೆ ಮಾತನಾಡಿದ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿಪಿನ್ ಬೂಪಣ್ಣ, ತಾಲೂಕಿನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೌಶಲ್ಯ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಆಯ್ಕೆಯಾದ ೨೧ ಜನರನ್ನು ಸಂಘದ ಸದಸ್ಯರನ್ನಾಗಿ ಮಾಡಿ ಒಂದು ಸಂಘ ರಚಿಸಿಕೊಡಲಾಗುತ್ತದೆ. ನಂತರ ಇವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ನೀಡಲಾಗುವುದು. ೨೧ ಸದಸ್ಯರಿರುವ ಸಂಘದಲ್ಲಿ ಮಹಿಳೆಯರು ಏಳು, ಪುರುಷರು ಆರು, ಎಸ್ಸಿ ಮೂರು, ಎಸ್ಟಿ ಒಂದು, ಅಲ್ಪಸಂಖ್ಯಾತ ಮೂವರನ್ನು ಆಯ್ಕೆಮಾಡಲಾಗುವುದೆಂದು ಹೇಳಿದರು.ಸಂಘ ರಚನೆಗೊಂಡ ಮೇಲೆ ಸಂಘದಿಂದ ಕೆರೆ ಪಡೆದು ನಿಗದಿ ಹಣ ತುಂಬಿ ಕೆರೆ ಅಭಿವೃದ್ಧಿ ಪಡಿಸಬೇಕು ಮತ್ತು ಮೀನು ಮರಿ ಬಿಟ್ಟು ಕಳ್ಳತನವಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಸರ್ಕಾರ ನಿಮ್ಮ ಹಿಂದೆ ನಿಂತು ಕೆಲಸಮಾಡುತ್ತದೆ ಎಂದರು.ಈ ವೇಳೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರತೀಕ ಶೆಟ್ಟಿ, ಸಹಾಯಕ ನಿರ್ದೇಶಕ ವೈಭವ, ನಿಯೋಜಿತ ಪುಣ್ಯಕೋಟಿ ಮೀನುಗಾರಿಕೆ ಸಂಘದ ಮುಖ್ಯ ಪ್ರಬಂಧಕರಾದ ಪುರುಷೋತ್ತಮ ದುರ್ಗಾ ಅಂಬಿಗಾ ಹಾಗೂ ಬದನಗೋಡ ಗ್ರಾಪಂ ಅಧ್ಯಕ್ಷ ನಟರಾಜ ಬಿ. ಹೊಸೂರ ಇದ್ದರು.