ಸಾರಾಂಶ
ಯಲ್ಲಾಪುರ: ಕೌಶಲ್ಯವಿಕಾಸ ತರಬೇತಿ ಪಡೆದ ಮಹಿಳೆಯರು ಸ್ವಾವಲಂಬಿ ಜೀವನದೊಂದಿಗೆ ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ತಿಳಿಸಿದರು.ಸೆ. ೫ರಂದು ಪಟ್ಟಣದ ಅಡಿಕೆ ಭವನದಲ್ಲಿ ಶಿರಸಿಯ ಗ್ರೀನ್ ಕೇರ್ ಸಂಸ್ಥೆ ಮತ್ತು ಯಲ್ಲಾಪುರದ ಕ್ರಿಯೇಟಿವ್ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯ ವಿಕಾಸ ಯೋಜನೆಯಡಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ ಮತ್ತು ಹೊಸದಾಗಿ ಬ್ಯುಟಿಶಿಯನ್ ಮತ್ತು ಫ್ಯಾಷನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಕೇರ್ ಸಂಸ್ಥೆಯ ಮಾಧ್ಯಮ ಸಲಹೆಗಾರ ಅಶೋಕ ಹಾಸ್ಯಗಾರ ಮಾತನಾಡಿ, ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳು ತಮ್ಮ ಉತ್ಪಾದನೆಗೆ ಆಧುನಿಕತೆಯ ಸ್ಪರ್ಶ ನೀಡಬೇಕು. ಗ್ರಾಹಕರ ಅಭಿರುಚಿಗೆ ತಕ್ಕುದಾದ ಉತ್ಪನ್ನಗಳನ್ನು ತಯಾರಿಸಬೇಕೆಂದು ಸಲಹೆ ನೀಡಿದರು.ತಾಲೂಕು ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ. ಮಾತನಾಡಿ, ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ವಿಕಾಸ ತರಬೇತಿ ನೆರವಾಗುವುದಲ್ಲದೆ ಮಹಿಳೆಯರ ಜೀವನಾಧಾರಕ್ಕೆ ಸಹಕಾರಿಯಾಗಿದೆ ಎಂದರು.
ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್.ಎಂ. ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿ, ಕೌಶಲ್ಯ ವಿಕಾಸ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎ೦ದರು.ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಶ್ರೀಪಾದ ಹೆಗಡೆ, ಆಸ್ಮಿತೆ ಫೌಂಡೇಶನ್‌ನ ರಿಯಾಜ್ ಸಾಗರ, ಗ್ರೀನ್ ಕೇರ್ ಸಂಸ್ಥೆಯ ಪದಾಧಿಕಾರಿ ಜಿ.ಎಂ. ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ ಅವರಿಗೆ ಗ್ರೀನ್ ಕೇರ್ ಸಂಸ್ಥೆಯ ಪರವಾಗಿ ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ಕ್ರಿಯೇಟಿವ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ ಮುರ್ಡೇಶ್ವರ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜಾ ನಿರ್ವಹಿಸಿ, ವಂದಿಸಿದರು. ತರಬೇತಿ ಪೂರ್ಣಗೊಳಿಸಿದ ತರಬೇತುದಾರರಿಗೆ ಪ್ರಮಾಣಪತ್ರ ವಿತರಿಸಲಾಯಿತು.