ಉದ್ಯೋಗ ಪಡೆಯಲು ಕೌಶಲ ತರಬೇತಿಗಳು ಅವಶ್ಯಕ

| Published : Jan 08 2024, 01:45 AM IST

ಸಾರಾಂಶ

ಉದ್ಯೋಗ ಪಡೆಯಲು ಕೌಶಲ ತರಬೇತಿಗಳು ಅವಶ್ಯಕ

ಕನ್ನಡಪ್ರಭ ವಾರ್ತೆ ಇಳಕಲ್ಲ

ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುವುದರ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಕೌಶಲ್ಯಗಳನ್ನು ಮತ್ತು ವಿವಿಧ ಕೋರ್ಸ್‌ಗಳನ್ನು ಪಡೆದರೆ ಬೇಗನೆ ಉದ್ಯೋಗಿಗಳಾಗಲು ಸಾಧ್ಯವಿದೆ ಎಂದು ನಿವೃತ್ರ ಪ್ರಾಚಾರ್ಯ ಡಾ.ಗಿರಿಯಪ್ಪ ಕೊಳ್ಳನ್ನವರ ಹೇಳಿದರು.

ಇಳಕಲ್ಲಿನ ವಿಜಯ ಮಹಾಂತೇಶ ವಿದ್ಯಾವರ್ದಕ ಸಂಘದ, ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಮತ್ತು ಬಿ.ಎ ಮತ್ತು ಬಿ.ಕಾಂ.ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಯಕತ್ವದ ಗುಣವನ್ನು ವಿದ್ಯಾರ್ಥಿದೆಸೆಯಲ್ಲಿ ಬೆಳೆಸಿಕೊಳ್ಳಲಿ ಎನ್ನುವ ಉದ್ದೇಶದಿಂದಲೇ ಒಕ್ಕೂಟ ರಚನೆ ಮಾಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಹಾವಿದ್ಯಾಲಯದ ಚೇರಮನ್‌ ಬಿ.ಎಮ್‌.ಕಬ್ಬಿಣದ, ಶ್ರೀಧರ ಪತ್ತೇಪೂರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ವಿ.ಸಿ.ನಿಲುಗಲ್ಲ, ಆಯ್.ಕ್ಯು.ಎ.ಸಿ.ಸಂಯೋಜಕ ಪ್ರೊ.ಪಿ.ಆರ್. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಅನುರಾಧಾ ಜಂಬಲದಿನ್ನಿ, ಶಶಿಕಲಾ ಪೂಜಾರಿ ಉಪಸ್ಥಿತರಿದ್ದರು.

ದೇವಿ ಬಡಿಗೇರ, ಕವಿತಾ ಬಡಿಗೇರ ಪ್ರಾರ್ಥಿಸಿದರು. ಪ್ರಾಚಾರ್ಯ ಬಿ.ಬಿ.ಸುಗ್ಗಮದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾ ಬಡಿಗೇರ ವಂದಿಸಿದರು. ಟಿ.ಎಮ್.ಕುಲಕರ್ಣಿ ನಿರೂಪಿಸಿದರು.