ಕೌಶಲ್ಯ, ಜ್ಞಾನಾಧಾರಿತ ಶಿಕ್ಷಣ ಅವಶ್ಯಕ

| Published : Jul 27 2024, 12:55 AM IST

ಸಾರಾಂಶ

ಜೀವನದಲ್ಲಿ ಯಾವುದೇ ವೃತ್ತಿ, ಕೆಲಸ ಮಾಡುವಾಗ ಶ್ರದ್ಧೆ ಪ್ರಾಮಾಣಿಕತೆ ನಮ್ಮದಾಗಿಸಿಕೊಂಡಾಗ ಅಲ್ಲಿ ಯಶಸ್ಸು ಪಡೆಯಲು ಸಾಧ್ಯ

ಗದಗ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಅಂಕ ಆಧಾರಿತ ಶಿಕ್ಷಣ ಪಡೆದುಕೊಳ್ಳದೆ ಕೌಶಲ್ಯ ಮತ್ತು ಜ್ಞಾನ ಪಡೆದುಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಪಿಪಿಜಿ ಪದವಿ ಮಹಾವಿದ್ಯಾಲಯದ ಪ್ರಾ. ರಾಜಶೇಖರ ದಾನರೆಡ್ಡಿ ಹೇಳಿದರು.

ಅವರು ನಗರದ ವಿದ್ಯಾದಾನ ಸಮಿತಿ ಬಾಲಕರ ಪಪೂ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ, ಇ.ಎಲ್.ಸಿ ಕ್ಲಬ್ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ವಿಜ್ಞಾನ ತಂತ್ರಜ್ಞಾನದ ಈಗಿನ ಕಾಲ ಸ್ಪರ್ಧಾತ್ಮಕ ಯುಗವಾಗಿದ್ದು, ನೀವು ಪರೀಕ್ಷೆಯಲ್ಲಿ ಪಡೆದುಕೊಳ್ಳುವ ಅಂಕಗಳಿಗೆ ಮಹತ್ವ ಇಲ್ಲ.ಆದರೆ ನೀವು ಪಡೆದುಕೊಂಡ ಜ್ಞಾನ ಯಾವ ರೀತಿಯಲ್ಲಿ ಕೌಶಲ್ಯ ಪೂರ್ಣವಾಗಿ ಉಪಯೋಗಿಸುತ್ತೀರಿ ಎನ್ನುವುದು ಮುಖ್ಯವಾಗುವುದರ ಜತೆಗೆ ಜೀವನಕ್ಕೆ ಹಾಗೂ ಸಮಾಜಕ್ಕೆ ಎಷ್ಟರಮಟ್ಟಿಗೆ ಅನ್ವಯವಾಗುವುದು ಮುಖ್ಯ. ಜ್ಞಾನಕ್ಕೆ ಪರ್ಯಾಯವಾದುದು ಯಾವುದು ಇಲ್ಲ, ಇದರ ಜತೆಗೆ ಸಂಸ್ಕಾರ ಅವಶ್ಯಕ ಎಂದು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.

ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಜೀವನದಲ್ಲಿ ಯಾವುದೇ ವೃತ್ತಿ, ಕೆಲಸ ಮಾಡುವಾಗ ಶ್ರದ್ಧೆ ಪ್ರಾಮಾಣಿಕತೆ ನಮ್ಮದಾಗಿಸಿಕೊಂಡಾಗ ಅಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಉಪನ್ಯಾಸಕರು ಹೇಳಿದ ಪಾಠ ಮನದಟ್ಟು ಮಾಡಿಕೊಂಡು ಪರೀಕ್ಷೆ ಎದುರಿಸುವುದರ ಜತೆಗೆ ಜೀವನ ಕಟ್ಟಿಕೊಳ್ಳುವ ಕಲೆ ಕರಗತ ಮಾಡಿಕೊಂಡಾಗ ಮಾತ್ರ ನಿಮ್ಮ ಉಪನ್ಯಾಸಕರ ಪರಿಶ್ರಮ ಫಲ ನೀಡುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿ.ಡಿ.ಎಸ್.ಟಿ.ಸಿ ಬಾಲಕರ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆಯ ಸಹಾಯಕರಾಗಿ ಸೇವೆಗೈದು ನಿವೃತ್ತರಾದ ಎಸ್.ಎಲ್. ಹುಯಿಲಗೋಳ, ಶಿಕ್ಷಕರಾಗಿ ನಿವೃತ್ತರಾದ ಎಸ್.ಕೆ.ಹೊಸಮನಿ ಹಾಗೂ ಪದೋನ್ನತಿ ಹೊಂದಿ ಪ್ರಾಚಾರ್ಯ ಡಾ.ರಾಜಶೇಖರ ದಾನರಡ್ಡಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾ.ಎಂ.ಸಿ. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಕಿಶೋರಬಾಬು ನಾಗರಕಟ್ಟಿ ಪರಿಚಯಿಸಿದರು.

ಹಿರಿಯ ಉಪನ್ಯಾಸಕ ಎಸ್.ಐ. ಮೇಟಿ, ಬ್ರಹ್ಮತೇಜ ಪೀಚಿ, ಲಕ್ಷ್ಮಿದೇವಿ ಹೊಸಳ್ಳಿ, ಉಪನ್ಯಾಸಕ ಪಿ.ಜೆ. ಕಟ್ಟಿಮನಿ, ಎಚ್.ಎನ್. ಕಾಳೆ, ಮಂಜುಳಾ ಗಿರಿಯಪ್ಪಗೌಡ್ರ, ವಿನಾಯಕ ಹಂಚಾಟೆ, ಶರಣಪ್ಪ ಸೋನಕೊಪ್ಪ ಉದ್ದರು. ಗೌರಮ್ಮ. ಎನ್.ಹೊಸಳ್ಳಿ, ಸಂಜನಾ ಹಂಚಿನಾಳ ನಿರೂಪಿಸಿದರು. ಉಪನ್ಯಾಸಕ ಜೆ.ಡಿ. ಸಂಶಿ ವಂದಿಸಿದರು.