ಸಂಸ್ಕಾರ ಕಲಿಸುವುದು ಪೋಷಕರಿಗೆ ಆದ್ಯತೆಯಾಗಬೇಕು: ಡಾ. ಗುರುರಾಜ ಕರ್ಜಗಿ

| Published : Apr 07 2024, 01:49 AM IST

ಸಂಸ್ಕಾರ ಕಲಿಸುವುದು ಪೋಷಕರಿಗೆ ಆದ್ಯತೆಯಾಗಬೇಕು: ಡಾ. ಗುರುರಾಜ ಕರ್ಜಗಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಸಂಸ್ಕಾರ, ಸನ್ನಡತೆ ರೂಪಿಸುವುದು ಪೋಷಕರಿಗೆ ಮೊದಲ ಆದ್ಯತೆಯಾಗಬೇಕು, ಮಗುವಿನ ತಾಯಿ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಿಗೆ ಸಂಸ್ಕಾರ, ಸನ್ನಡತೆ ರೂಪಿಸುವುದು ಪೋಷಕರಿಗೆ ಮೊದಲ ಆದ್ಯತೆಯಾಗಬೇಕು, ಮಗುವಿನ ತಾಯಿ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಪೋಷಕರಿಗೆ ಕಿವಿಮಾತು ಹೇಳಿದರು.

ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಒಂದೆರೆಡು ವರ್ಷದಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್'''''''' ಶೈಕ್ಷಣಿಕ ರಂಗದಲ್ಲಿ ಅಗ್ರಪಂಕ್ತಿ ಅಲಂಕರಿಸುವ ವಿಶ್ವಾಸವಿದೆ. ಫಲಪ್ರದ ಶಿಕ್ಷಣದಲ್ಲಿ ಪೋಷಕರ ಪಾತ್ರ ಅಗಾಧವಾದುದು. ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳನ್ನು ಚಿಕ್ಕಂದಿನಿಂದಲೇ ರೂಢಿಸಬೇಕು. ಪೋಷಕರು ಮಕ್ಕಳಿಗೆ ಪ್ರಾಮಾಣಿಕತೆ, ಸಂಸ್ಕಾರವಂತ ನಡವಳಿಕೆ ಕಲಿಸುವತ್ತ ಗಮನ ಹರಿಸಬೇಕು. ಒಳ್ಳೆಯ ಅಭ್ಯಾಸ ರೂಢಿಸಿದರೆ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದರು.

ಪ್ರತಿಯೊಂದು ಮಗುವೂ ’ವಿಶ್ವ ಪ್ರಜೆ’ ಎನ್ನುವುದು ಪೋಷಕರು ಹಾಗೂ ಶಿಕ್ಷಕರ ಅರಿವಿನಲ್ಲಿರಬೇಕು. ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರ ತಳೆದ ಪುಷ್ಪ ಎಂಬ ಡಿವಿಜಿ ಅವರ ಸಾಲಿನಂತೆ ಪುಸ್ತಕಕ್ಕಿಂತ ಮಸ್ತಕದ ಅರಿವು ಶಾಶ್ವತ. ಈ ನಿಟ್ಟಿನಲ್ಲಿ ನೈಪುಣ್ಯ ಶಾಲೆಯಲ್ಲಿ ಬಿತ್ತನೆ ಮಾಡಿ, ಬೆಳೆಯುವುದನ್ನು ಪ್ರಾಯೋಗಿಕವಾಗಿ ಕಲಿಸುತ್ತಿರುವುದು ಶ್ಲಾಘನೀಯ ಎಂದರು.

ಅದೇ ರೀತಿ ಪೋಷಕರೂ ಕೂಡ ಮಕ್ಕಳ ಮುಂದೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಮಕ್ಕಳಲ್ಲಿ ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಂಬಿಕೆ ಬೆಳೆಸಬೇಕು ಎಂದು ಅವರು ಹೇಳಿದರು.

ಶಾಲೆಯ ಸಂಸ್ಥಾಪಕ, ಅಧ್ಯಕ್ಷ ಆರ್. ರಘು ಮಾತನಾಡಿ, ಮಕ್ಕಳ ಆಸಕ್ತಿ ವಲಯವನ್ನು ಗುರುತಿಸಿ ಅದನ್ನು ಸಕಾರಾತ್ಮಕವಾಗಿ ಬೆಳೆಸಬೇಕು. ಇದರಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಸಮಾನವಾಗಿದೆ. ಮೊಬೈಲ್ ಮಾಹಿತಿ ಕೋಶವಷ್ಟೇ. ಪುಸ್ತಕ ಜ್ಞಾನ ಭಂಡಾರ. ಮಕ್ಕಳ ಬುದ್ದಿಗೆ ಮಂಕು ಬರಿಸುವ ಸ್ಮಾರ್ಟ್ ಫೋನ್ ಗಳನ್ನು ದೂರವಿಡಿ. ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಶಿಕ್ಷಣದ ಜೊತೆಗೆ ಸುಪ್ತ ಪ್ರತಿಭೆಗೆ ನೀರೆರೆದು ಪೋಷಿಸುವುದು ನಮ್ಮ ಸಂಸ್ಥೆ ಉದ್ದೇಶ ಎಂದರು.

ವಾರ್ಷಿಕೋತ್ಸವದ ಸಂಭ್ರಮದ ಜೊತೆಗೆ ಕರ್ನಾಟಕದ ಗಡಿನಾಡುಗಳ ಸಂಸ್ಕೃತಿಯ ಅನಾವರಣವಾಯಿತು. ವೀರಗಾಸೆ, ಕಂಸಾಳೆ, ಕೋಲಾಟ, ಭರತನಾಟ್ಯ ಸೇರಿದಂತೆ ನಾಡಿನ ಎಲ್ಲಾ ಕಲಾಪ್ರಕಾರಗಳನ್ನೂ ಶಾಲಾ ಮಕ್ಕಳು ಕಣ್ಣಿಗೆ ಕಟ್ಟಿದರು. ನೆರೆದಿದ್ದ ಪೋಷಕರು ಹಾಗೂ ಅವರ ಸಂಬಂಧಿಕರು, ಶಿಕ್ಷಕರು ಪುಟ್ಟ ಮಕ್ಕಳ ಪ್ರತಿಭೆಯನ್ನು ಆಸ್ವಾದಿಸಿ, ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್, ಪ್ರಾಂಶುಪಾಲೆ ಶೋಭಿತಾ ಎಸ್. ಆರಾಧ್ಯ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಭಾವನಾ ಶ್ರೀಕಾಂತ್ ಮೊದಲಾದವರು ಇದ್ದರು.