ಸಾರಾಂಶ
ವರ್ತಮಾನದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ.ವಿಷ್ಣುಮೂರ್ತಿ ಹೇಳಿದರು.
ಉದ್ಯೋಗ ಕೌಶಲ್ಯ ತರಬೇತಿ ಹಾಗೂ ಬೋಧಕರ ತರಬೇತಿ ಕಾರ್‍ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವರ್ತಮಾನದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ.ವಿಷ್ಣುಮೂರ್ತಿ ಹೇಳಿದರು.
ಐಡಿಎಸ್‌ಜಿ ಸರ್ಕಾರಿ ಕಾಲೇಜು, ಕಾಲೇಜು ಶಿಕ್ಷಣ ಇಲಾಖೆ, ವಾದ್ವಾನಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್‍ಯಕ್ರಮ ಹಾಗೂ ಜಿಲ್ಲೆಯ ಬೋಧಕರ ತರಬೇತಿ ಕಾರ್‍ಯಾಗಾರದಲ್ಲಿ ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಿಲ್ಲೊಂದು ರೀತಿ ಕೌಶಲ್ಯ ಹೊಂದಿರುತ್ತಾನೆ. ಅದನ್ನು ಗುರುತಿಸಿ ಪೋಷಿಸುವ ಕೆಲಸ ಆಗಬೇಕು. ನಾಲ್ಕು ಗೋಡೆಗಳ ನಡುವೆ ಕಲಿಸುವ ಶಿಕ್ಷಣದಿಂದ ಇಂದು ಉದ್ಯೋಗಾವಕಾಶ ಗಳಿಸುವುದು ಕಷ್ಟಕರ. ವರ್ತ ಮಾನದ ಸ್ಪರ್ಧೆಗಳಿಗೆ ಅಗತ್ಯವಾದ ಕೌಶಲ್ಯಗಳ ಮೂಲಕ ಯುವ ಜನರನ್ನು ಸಜ್ಜುಗೊಳಿಸಬೇಕಾಗಿದೆ. ಸಂವಹನ ಕೌಶಲ್ಯ, ಮಾನಸಿಕ ಸಾಮರ್ಥ್ಯದ ಕುಶಲತೆಗಳು, ವಿಶ್ಲೇಷಣಾತ್ಮಕತೆ, ಆಧುನಿಕ ತಂತ್ರಜ್ಞಾನ ಮತ್ತಿತರ ಸಂಗತಿಗಳಲ್ಲಿ ವರ್ತಮಾನದ ಉದ್ಯೋಗಕ್ಕೆ ತಕ್ಕಂತೆ ಸಿದ್ಧತೆಗಳೆ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿ ಹಿಂಜರಿಕೆ, ಅಳುಕು ಇರುತ್ತದೆ. ಇವುಗಳಿಂದ ಹೊರಬಂದು ಔದ್ಯೋಗಿಕ ರಂಗದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಸ್ವಾಭಿಮಾನವನ್ನು ಪ್ರೇರೇಪಿಸುವ ಕಾರ್‍ಯವಾಗಬೇಕೆಂದು ಹೇಳಿದರು.ಅಧ್ಯಾಪಕರಲ್ಲಿ ಸಮರ್ಪಣಾ ಮನೋಭಾವ ಜಾಗೃತಗೊಳ್ಳಬೇಕು. ಇದರ ಮಹತ್ವವನ್ನು ಅರ್ಥ ಮಾಡಿಕೊಂಡು ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿಯುತ ಹಾಗೂ ಸಾರ್ಥಕ ಕೆಲಸ ಆಗಬೇಕಾಗಿದೆ ಎಂದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕೆ.ಸಿ. ಚಾಂದಿನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತವಾಗಿ ತರಬೇತಿ ನೀಡಿ, ಬದುಕು ಕಟ್ಟಿಕೊಳ್ಳಲು ನೆರವು ನೀಡುವ ಪ್ರಯತ್ನವಿದು. ಪದವಿ ಶಿಕ್ಷಣದ ನಂತರ ಉದ್ಯೋಗಾವಕಾಶಗಳಿಗೆ ಅಣಿಗೊಳಿಸುವ ಕಾರ್ಯವಿದು ಎಂದ ಅವರು, ಪ್ರಸ್ತುತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ವಾದ್ವಾನಿ ಫೌಂಡೇಶನ ಮುಖ್ಯ ತರಬೇತುದಾರರಾದ ಸ್ವಾತಿ ಪುತ್ರನ್ ಉದ್ಯೋಗ ಕೌಶಲ್ಯ ತರಬೇತಿಗೆ ಅಗತ್ಯವಾದ ಪೂರ್ವ ತಯಾರಿ ಕುರಿತಂತೆ ಮಾಹಿತಿ ನೀಡಿದರು. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ವಿಶೇಷಾಧಿಕಾರಿ ಡಾ.ಎ. ಅನಿತಾ, ಐಕ್ಯೂಎಸಿ ಸಂಯೋಜಕಿ ಡಾ.ಕಲಾವತಿ, ಹಿರಿಯ ಉಪನ್ಯಾಸಕ ಡಾ.ಎಸ್.ಇ.ನಟರಾಜ್ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಜಿಲ್ಲೆಯ ಸರ್ಕಾರಿ ಪದವಿ ಕಾಲೇಜು ಮತ್ತು ಪಾಲಿಟೆಕ್ನಿಕ್‌ನ 25 ಬೋಧಕರು ಎರಡು ದಿನಗಳ ಕಾರ್‍ಯಾಗಾರದಲ್ಲಿ ಭಾಗವಹಿಸಿದ್ದರು. ಪದವಿ ವಿಭಾಗ ಉದ್ಯೋಗ ಕೋಶದ ಸಂಚಾಲಕ ಡಾ.ಆರ್.ರಾಧಾಕೃಷ್ಣನ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಉದ್ಯೋಗಕೋಶದ ಸಂಯೋಜಕ ಡಾ.ಕೆ.ಎಂ.ಜಗದೀಶ್ ವಂದಿಸಿದರು. 15 ಕೆಸಿಕೆಎಂ 4ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಹಾಗೂ ಬೋಧಕರ ತರಬೇತಿ ಕಾರ್‍ಯಾಗಾರವನ್ನು ಪ್ರೊ.ವಿಷ್ಣುಮೂರ್ತಿ ಅವರು ಉದ್ಘಾಟಿಸಿದರು. ಸ್ವಾತಿ ಪುತ್ರನ್, ಡಾ. ಎ. ಅನಿತಾ ಇದ್ದರು.