ಬೆಳೆ ಸಮೀಕ್ಷೆ ವೇಳೆ ಕುತಂತ್ರ ಬಿಟ್ಟು, ನಿಖರ ಬೆಳೆ ನಮೂದಿಸಿ

| Published : Mar 07 2025, 12:46 AM IST

ಸಾರಾಂಶ

ರೈತರು ಬೆಳೆ ಸಮೀಕ್ಷೆ ಕೈಗೊಂಡಾಗ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಬೇಕು. ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿ ಅಸಗೋಡು ಗ್ರಾಮ ವ್ಯಾಪ್ತಿಯಲ್ಲಿ 545 ಎಕರೆ ಟೊಮೆಟೋಗೆ ವಿಮೆ ಪಾವತಿಸಿದ್ದು, ವಾಸ್ತವದಲ್ಲಿ 11.23 ಎಕರೆ ಟೊಮೆಟೋ ಬೆಳೆ ಬೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- 545 ಎಕರೆ ಟೊಮೆಟೋ ವಿಮಾ ಪಾವತಿ, ವಾಸ್ತವದಲ್ಲಿ ಬೆಳೆದಿದ್ದು ಕೇವಲ 11.23 ಎಕರೆ ಬೆಳೆ: ಡಿಸಿ ಮಾಹಿತಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರು ಬೆಳೆ ಸಮೀಕ್ಷೆ ಕೈಗೊಂಡಾಗ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಬೇಕು. ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿ ಅಸಗೋಡು ಗ್ರಾಮ ವ್ಯಾಪ್ತಿಯಲ್ಲಿ 545 ಎಕರೆ ಟೊಮೆಟೋಗೆ ವಿಮೆ ಪಾವತಿಸಿದ್ದು, ವಾಸ್ತವದಲ್ಲಿ 11.23 ಎಕರೆ ಟೊಮೆಟೋ ಬೆಳೆ ಬೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿಳಿಚೋಡು ಹೋಬಳಿಯ ಅಸಗೋಡು ಗ್ರಾಮದಲ್ಲಿ ಟೊಮೆಟೋ ಬೆಳೆಗೆ ರೈತರು ಬೆಳೆ ವಿಮಾ ಕಂತನ್ನು ಪಾವತಿಸಿದ್ದಾರೆ. ಅಕ್ರಮವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಟೊಮೆಟೋ ಬೆಳೆಯನ್ನು ಖಾಸಗಿ ನಿವಾಸಿಗಳ ನೆರವಿನಿಂದ ದಾಖಲಿಸಲಾಗಿದೆ. ಸಾಂಪ್ರದಾಯಿಕವಾಗಿ ಬೆಳೆಯಲ್ಪಡುವ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಟೊಮೆಟೋ ಬೆಳೆ ದಾಖಲಾಗಿದ್ದರಿಂದ, ಜಿಲ್ಲೆಯ ಉಪವಿಭಾಗಾಧಿಕಾರಿಗಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಭೌತಿಕವಾಗಿ 307 ಪ್ಲಾಟ್‌ಗಳನ್ನು ಪುನರ್ ಪರಿಶೀಲಿಸಲಾಯಿತು. ಆಗ ಕೇವಲ 13 ಪ್ಲಾಟ್‌ಗಳಲ್ಲಿ ಟೊಮೆಟೋ ಬೆಳೆ ಬೆಳೆದಿರುವುದು ಕಂಡುಬಂದಿದೆ. 545 ಎಕರೆ ಪ್ರದೇಶಕ್ಕೆ ಬೆಳೆ ವಿಮಾ ಕಂತನ್ನು ಪಾವತಿಸಲಾಗಿದ್ದು, ಕೇವಲ 11.23 ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆ ಕಂಡುಬಂದಿದೆ ಎಂದಿದ್ದಾರೆ.

ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರು ಪಾವತಿಸಿರುವ ಬೆಳೆವಿಮಾ ಕಂತು ಹಾಗೂ ಬೆಳೆದಿರುವ ಬೆಳೆ ಮತ್ತು ವಿಸ್ತೀರ್ಣ ಬಹಳ ಮುಖ್ಯವಾಗಿರುತ್ತದೆ. ರೈತರು ತಾವು ಬೆಳೆದಿರುವ ಬೆಳೆಯನ್ನು “ಬೆಳೆ ಸಮೀಕ್ಷೆ” ಆ್ಯಪ್‌ನಲ್ಲಿ ದಾಖಲಿಸಲು ಅವಕಾಶವಿದೆ. ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಮಾಹಿತಿ ದಾಖಲಿಸಲು ರೈತರಿಗೆ ಕಷ್ಟವಾದಲ್ಲಿ ಸಂಬಂಧಿಸಿದ ಗ್ರಾಮದಲ್ಲಿನ ಖಾಸಗಿ ನಿವಾಸಿಗಳಿಂದ ಬೆಳೆ ದಾಖಲೀಕರಣವನ್ನು ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತದಿಂದ ಈ ಚಟುವಟಿಕೆ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಮೆ ಪರಿಹಾರ ದೊರಕಿಸಿಕೊಡಲು ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ₹140 ಕೋಟಿಗಳಿಗಿಂತಲೂ ಹೆಚ್ಚು ವಿಮಾ ಪರಿಹಾರವಾಗಿ ನೀಡಿದ್ದು ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

- - -

ಬಾಕ್ಸ್‌ * ಆಮಿಷವೊಡ್ಡಿದರೆ ಗಮನಕ್ಕೆ ತನ್ನಿ ಬೆಳೆ ಸಮೀಕ್ಷೆ ಮಾಡುವಾಗ ಅಥವಾ ಸಮೀಕ್ಷೆ ಮಾಡಿಸುವಾಗ ಕಡ್ಡಾಯವಾಗಿ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ಪ್ರಲೋಭನೆಗೆ ಒಳಗಾಗದೇ ತಾವು ನಿಖರವಾಗಿ ಬೆಳೆ ಮಾಹಿತಿ ದಾಖಲಿಸಬೇಕು. ಯಾರಾದರೂ ತಪ್ಪು ಮಾಹಿತಿ ನೀಡಲು ಆಮಿಷವೊಡ್ಡಿದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- - -

-5ಕೆಡಿವಿಜಿ36: ಜಿ.ಎಂ. ಗಂಗಾಧರ ಸ್ವಾಮಿ