ಪಣಂಬೂರು ಬೀಚ್‌ನಲ್ಲಿ ’ಸ್ಕೈಡೈನಿಂಗ್’ ಹೊಟೇಲ್‌ ಆಕರ್ಷಣೆ

| Published : Apr 22 2024, 02:19 AM IST

ಪಣಂಬೂರು ಬೀಚ್‌ನಲ್ಲಿ ’ಸ್ಕೈಡೈನಿಂಗ್’ ಹೊಟೇಲ್‌ ಆಕರ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

‘ಸ್ಕೈ ಡೈನಿಂಗ್‌’ ಎಂದರೆ ನೆಲಕ್ಕಿಂತ ಹಲವು ಅಡಿಗಳಷ್ಟು ಮೇಲ್ಭಾಗದಲ್ಲಿ ಕುಳಿತು ಊಟಮಾಡುವುದು. ಇದೊಂದು ಸಾಹಸವೂ ಹೌದು.

ಕನ್ನಡಪ್ರಭ ವಾರ್ತೆ ಮಂಗಳೂರು

ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಕಾಶದೆತ್ತರದಲ್ಲಿ ಕುಳಿತು ಆಹಾರ ಸೇವಿಸುವ ಹೊಟೇಲ್‌ ಸಿದ್ಧವಾಗಲಿದೆ!

ಭೂಮಿಯಿಂದ ಸುಮಾರು 120 ಅಡಿ ಎತ್ತರದಲ್ಲಿ ಕುಳಿತು ಕಡಲ ನಗರಿ ಮಂಗಳೂರನ್ನು ಕಣ್ತುಂಬ ನೋಡುತ್ತಲೇ ಅಹಾರ ಸವಿಯಲು ಹೊಸ ಅವಕಾಶ ಲಭಿಸಿದೆ.

ಬೀಚ್‌ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿಸುವ ಸಲುವಾಗಿ ದೇಶದ ಕರಾವಳಿ ತೀರದಲ್ಲೇ ಮೊದಲ ಬಾರಿಗೆ ‘ಸ್ಕೈ ಡೈನಿಂಗ್‌’ ಪರಿಕಲ್ಪನೆ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಶೀಘ್ರ ಆರಂಭವಾಗಲಿದೆ.ದ.ಕ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪಣಂಬೂರು ಬೀಚ್‌ನ ಅಭಿವೃದ್ಧಿಯ ಗುತ್ತಿಗೆ ಪಡೆದಿರುವ ‘ಕದಳೀ ಬೀಚ್‌ ಟೂರಿಸಂ ಸಂಸ್ಥೆ’ ಈ ವಿನೂತನ ಯೋಜನೆಯನ್ನು ಕರಾವಳಿಗೆ ಪರಿಚಯಿಸುತ್ತಿದೆ. ಮೇ ಮೊದಲ ವಾರದಿಂದಲೇ ‘ಸ್ಕೈ ಡೈನಿಂಗ್‌’ ಅಧಿಕೃವಾಗಿ ಕಾರ್ಯಾರಂಭಿಸುವ ಸಾಧ್ಯತೆ ಇದೆ.

120 ಅಡಿ ಎತ್ತರದಲ್ಲಿ ಡೈನಿಂಗ್‌:

‘ಸ್ಕೈ ಡೈನಿಂಗ್‌’ಗೆ ಸಂಬಂಧಿಸಿದ ವಿವಿಧ ನಿರ್ಮಾಣ ಪ್ರಕ್ರಿಯೆಗಳು ಆರಂಭವಾಗಿದೆ. ‘ಸ್ಕೈ ಡೈನಿಂಗ್‌’ನ ಪ್ರಧಾನ ಅಂಗವಾಗಿರುವ ಕ್ರೇನ್‌ ರಚನೆಗೆ ತಳಪಾಯ ಹಾಕುವ ಕಾಮಗಾರಿ ನಡೆಯುತ್ತಿದೆ. ಈ ಕ್ರೇನ್‌ 120 ಅಡಿಗಳಷ್ಟು ಎತ್ತರಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮೀಶ ಭಂಡಾರಿ.ಸ್ಕೈ ಡೈನಿಂಗ್‌ನಲ್ಲಿ ಒಂದು ಬಾರಿ 16 ಮಂದಿ ಮೇಲೆ ಹೋಗಿ ಊಟ, ತಿಂಡಿ ಸವಿಯಬಹುದು. ಗ್ರಾಹಕರು ಕುಳಿತುಕೊಳ್ಳುವ ಚೇರ್‌ಗೆ ಸೇಫ್ಟಿಬೆಲ್ಟ್‌ ಅಳವಡಿಸಲಾಗುತ್ತದೆ. ಸಿಬ್ಬಂದಿ ಕ್ಯಾಬಿನ್‌ನಲ್ಲಿ ಇರುತ್ತಾರೆ. ಆಹಾರ ತಯಾರಿಸಲು ಕೆಳಗೆ ಪ್ರತ್ಯೇಕ ಅಡುಗೆ ಮನೆ ರಚಿಸಲಾಗುತ್ತಿದೆ. ಸಿದ್ಧಪಡಿಸಿದ ಆಹಾರವನ್ನು ಮೇಲೆ ತೆಗೆದುಕೊಂಡು ಹೋಗಿ ಬಡಿಸಲಾಗುತ್ತದೆ. ಜತೆಗೆ ಸಂಗೀತ ಆಸ್ವಾದಿಸುವ ಅವಕಾಶವೂ ಇಲ್ಲಿದೆ.

ಏನಿದು ‘ಸ್ಕೈ ಡೈನಿಂಗ್‌’?‘ಸ್ಕೈ ಡೈನಿಂಗ್‌’ ಎಂದರೆ ನೆಲಕ್ಕಿಂತ ಹಲವು ಅಡಿಗಳಷ್ಟು ಮೇಲ್ಭಾಗದಲ್ಲಿ ಕುಳಿತು ಊಟಮಾಡುವುದು. ಇದೊಂದು ಸಾಹಸವೂ ಹೌದು. ಗಾಜಿನ ಮಾದರಿಯ ಪಾರದರ್ಶಕ ವಸ್ತು ಮತ್ತು ಕಬ್ಬಿಣದಿಂದ ರಚಿಸಲಾದ ಕ್ಯಾಬಿನ್‌ನ್ನು ಕ್ರೇನ್‌ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಇದರಲ್ಲಿ ಟೇಬಲ್‌, ಚೇರ್‌ ಸಹಿತ ರೆಸ್ಟಾರೆಂಟ್‌ನಲ್ಲಿರುವಂತೆ ಎಲ್ಲ ರೀತಿಯ ವ್ಯವಸ್ಥೆಯೂ ಇರುತ್ತದೆ. ಕೆಳಭಾಗದ ವಿಹಂಗಮ ದೃಶ್ಯವನ್ನು ನೋಡುತ್ತಾ ಊಟ, ತಿಂಡಿ ಸವಿಯಬಹುದು.