ಗಗನಮುಖಿಯಾದ ತೆಂಗಿನಕಾಯಿ ದರ

| Published : Feb 24 2025, 12:31 AM IST

ಸಾರಾಂಶ

ಸಾಮಾನ್ಯವಾಗಿ ತುಮಕೂರು,ತಿಪಟೂರು, ಹೊಸದುರ್ಗ ಮತ್ತು ನೆರೆಯ ತಮಿಳುನಾಡು,ಕೇರಳ, ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಗಳಿಂದ ಹೆಚ್ಚಾಗಿ ತೆಂಗಿನಕಾಯಿ ಆವಕವಾಗುತ್ತಿತ್ತು. ಈಗ ಅಲ್ಲಿಂದ ಆವಕವಾಗುವುದು ಕಡಿಮೆಯಾಗುತ್ತಿದೆ. ಜೊತೆಗೆ, ಅಲ್ಲಿಯೇ ದರ ಹೆಚ್ಚಾಗಿದೆ. ಹಾಗಾಗಿ, ಜಿಲ್ಲೆಯಲ್ಲೂ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ತೆಂಗಿನಕಾಯಿ ದರದಲ್ಲಿ ಭಾರಿ ಏರಿಕೆಯಾಗಿದೆ. 3 ತಿಂಗಳ ಹಿಂದೆ ಇಲ್ಲಿನ ಎಪಿಎಂಸಿ ಮಂಡಿಗಳಲ್ಲಿ ಕೆ.ಜಿಗೆ 40 ರು.ನಿಂದ 50ರ ವರೆಗೆ ಇದ್ದ ದರ ಈಗ 80 ರು.ಗಳನ್ನು ತಲುಪಿದೆ. ಹಾಪ್‌ಕಾಮ್ಸ್‌ನಲ್ಲೂ ಇದೇ ದರ ಇದೆ. ಖಾಸಗಿ ಮಾರುಕಟ್ಟೆಯಲ್ಲೂ ದರ ದುಪ್ಪಟ್ಟಾಗಿದೆ. ಪ್ರತಿ ವಾರ ನಡೆಯುವ ಸಂತೆಯಲ್ಲಿ ಸಾಮಾನ್ಯವಾಗಿ ಒಂದು ತೆಂಗಿನಕಾಯಿಗೆ ಕನಿಷ್ಠ 10ರಿಂದ ಗರಿಷ್ಠ 20 ಅಥವಾ 25ರವರೆಗೆ ದರ ಇರುತ್ತಿತ್ತು. ಆದರೆ, ಈಗ ತೆಂಗಿನಕಾಯಿಯೇ ಸಿಗದ ಸ್ಥಿತಿ ನಿರ್ಮಾಣವಾಗಿದೆ. 10 ರು.ಗೆ ಸಿಗುತ್ತಿದ್ದ ತೆಂಗಿನಕಾಯಿ ಈಗ 30 ರೂಪಾಯಿ ದಾಟಿದೆ. ಮಧ್ಯಮ ಗಾತ್ರದ ತೆಂಗಿನಕಾಯಿ ಬೆಲೆಯೇ 40 ರು.ಗಳಾಗಿವೆ. ಇದರಿಂದ ಜನಸಾಮಾನ್ಯರು ತೆಂಗಿನಕಾಯಿ ಖರೀದಿಗೆ ಹಿಂದೇಟು ಹಾಕುವಂತಾಗಿದೆ.ಸಮಾರಂಭಗಳಿಗೆ ಕಾಯಿ ಅಗತ್ಯ

ಸಾಮಾನ್ಯವಾಗಿ ಅಡುಗೆಗೆ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ಶುಭ, ಅಶುಭ ಸಮಾರಂಭಗಳಿಗೂ ತೆಂಗಿನಕಾಯಿಗೂ ಅವಿನಾಭಾವ ಸಂಬಂಧ ಇದೆ. ಈ ಸಮಾರಂಭಗಳಲ್ಲಿ ಮಾಡುವ ಅಡುಗೆಗಳಿಗೆ ತೆಂಗಿನಕಾಯಿಯನ್ನು ಬಳಸಿಯೇ ಬಳಸುತ್ತಾರೆ. ದರ ಏರಿಕೆಯು ಸಮಾರಂಭ ಮಾಡುವವರ ಖರ್ಚು ಹೆಚ್ಚಾಗುವಂತೆ ಮಾಡಿದೆ.ಜಿಲ್ಲೆಗೆ ಗೆ ಸಾಮಾನ್ಯವಾಗಿ ತುಮಕೂರು,ತಿಪಟೂರು, ಹೊಸದುರ್ಗ ಮತ್ತು ನೆರೆಯ ತಮಿಳುನಾಡು,ಕೇರಳ, ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಗಳಿಂದ ಹೆಚ್ಚಾಗಿ ತೆಂಗಿನಕಾಯಿ ಆವಕವಾಗುತ್ತಿತ್ತು. ಈಗ ಅಲ್ಲಿಂದ ಆವಕವಾಗುವುದು ಕಡಿಮೆಯಾಗುತ್ತಿದೆ. ಜೊತೆಗೆ, ಅಲ್ಲಿಯೇ ದರ ಹೆಚ್ಚಾಗಿದೆ. ಹಾಗಾಗಿ, ಜಿಲ್ಲೆಯಲ್ಲೂ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.ಎಳೆನೀರು ಮಾರಾಟ ಕಾರಣ

ತೆಂಗಿನಕಾಯಿ ದರ ಹೆಚ್ಚಾಗಲು ಎಳನೀರು ಮಾರಾಟ ಕಾರಣ ಎನ್ನಲಾಗಿದೆ. ಈಗ ಬೇಸಿಗೆ ಕಾಲವಾದ ಕಾರಣ ದಾಹವನ್ನು ತಣಿಸಲು ಹೆಚ್ಚಿನ ಜನರು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ರಾಜ್ಯದ ಉದ್ದಗಲಕ್ಕೂ ಇದೆ. ಎಳೆನೀರು 40 ರಿಂದ 50 ಕ್ಕೆ ಚಿಲ್ಲರೆ ಮಾರಾಟವಾಗುತ್ತಿದ್ದು, ವ್ಯಾಪಾರಿಗಳು ರೈತರಿಂದ ತೋಟದಲ್ಲಿ 30 ರಿಂದ 40 ರೂಗಳಿಗೆ ಕೊಳ್ಳುತ್ತಿದ್ದಾರೆ.

ಎಳೆನೀರಿಗೆ ಬೇಡಿಕೆ ಹೆಚ್ಚು

ಹಾಗಾಗಿ ಎಳನೀರಿಗೆ ಸೃಷ್ಟಿಯಾಗಿರುವ ಬೇಡಿಕೆಯಿಂದ ರೈತರು ತೆಂಗಿನಕಾಯಿ ಆಗುವುದಕ್ಕೂ ಮುನ್ನ ಎಳನೀರನ್ನೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತೆಂಗಿನಕಾಯಿಯ ಆವಕ ಕಡಿಮೆಯಾಗಿದ್ದು ದರ ಏರಿಕೆ ಇದೇ ಪ್ರಧಾನ ಕಾರಣ ಎನಿಸಿದೆ. ಮಳೆ ಸುರಿದು ವಾತಾವರಣ ತಂಪಾಗಿ ಎಳನೀರಿಗೆ ಬೇಡಿಕೆ ಇಳಿಕೆಯಾಗುವವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.