ಬಂಡವಾಳಶಾಹಿ ಅಧಿಕಾರ ಒಪ್ಪಿದಿರುವುದರಿಂದ ಅಪಪ್ರಚಾರ

| Published : Aug 30 2024, 01:08 AM IST

ಸಾರಾಂಶ

ತಮ್ಮ ಮನಸ್ಸಿನೊಳಗಿರುವ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಒಪ್ಪಿಕೊಳ್ಳದೇ ಇರುವುದರಿಂದ ಕೆಲವು ಬಂಡವಾಳಶಾಹಿಗಳು ಮಠ ಮತ್ತು ಸಮಾಜದ ವಿರುದ್ಧ ನಿರಂತರ ಮಿತ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆತಮ್ಮ ಮನಸ್ಸಿನೊಳಗಿರುವ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಒಪ್ಪಿಕೊಳ್ಳದೇ ಇರುವುದರಿಂದ ಕೆಲವು ಬಂಡವಾಳಶಾಹಿಗಳು ಮಠ ಮತ್ತು ಸಮಾಜದ ವಿರುದ್ಧ ನಿರಂತರ ಮಿತ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಸಿರಿಗೆರೆಯ ಗುರುಶಾಂತರಾಜ ದೇಶಿಕೇಂದ್ರ ದಾಸೋಹ ಮಂಟಪದಲ್ಲಿ ಹರಪನಹಳ್ಳಿ, ಚಿತ್ರದುರ್ಗ ಮತ್ತು ಹೊಳಲ್ಕೆರೆಯ ಸಾಧು ವೀರಶೈವ ಸಂಘದ ಭಕ್ತರ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಮಠವು ಬಂಡವಾಳ ಶಾಹಿಗಳ ಹಿಡಿತದಲ್ಲಿಲ್ಲ. ಅವರು ಮಾಡುತ್ತಿರುವ ಆರೋಪಗಳಿಗೆ ನಾವು ದೃತಿಗೆಡುವುದಿಲ್ಲ, ಜಗ್ಗುವುದಿಲ್ಲ, ಬಗ್ಗುವುದಿಲ್ಲವೆಂದು ಸ್ಪಷ್ಟಪಡಿಸಿದರು.ಚಿಕ್ಕಮಕ್ಕಳಿಗೆ ದೃಷ್ಟಿಬೊಟ್ಟು ಇಟ್ಟು, ಅವರ ಚೆಂದವನ್ನು ನೋಡುವಂತೆ ಇಂತಹ ಕಪ್ಪುಚುಕ್ಕೆಗಳಿಂದ ನಮ್ಮ ಮಠಕ್ಕೆ ಇನ್ನಷ್ಟು ಮೆರಗು ಬರುತ್ತದೆ. ದೃಢತೆಯಿಂದ ಸೇವೆ ಮಾಡಲು ಅವಕಾಶವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.ಮಠ ವಿಚಾರವಾಗಿ ಕೆಲವರು ಸಂಘರ್ಷಗಳನ್ನು ಹುಟ್ಟುಹಾಕುತ್ತಲೇ ಬಂದಿದ್ದಾರೆ. ನಾವು ಮಠದ ಆಸ್ತಿ, ದುಡ್ಡು ಮತ್ತು ಅಧಿಕಾರಗಳನ್ನು ಗಮನದಲ್ಲಿಟ್ಟುಕೊಂಡು ಸ್ವಾಮಿಗಳಾದವರಲ್ಲ. ಮಠದ ಯಾವುದೇ ಆಸ್ತಿಯೂ ನಮ್ಮದಲ್ಲ. ಕೆಲವು ಮಠದ ಹೆಸರಿನಲ್ಲಿವೆ. ಮತ್ತೆ ಕೆಲವು ನಮ್ಮ ಹೆಸರಿನಲ್ಲಿವೆ. ಇನ್ನು ಕೆಲವು ಶಿಷ್ಯರ ಹೆಸರಿನಲ್ಲಿವೆ. ಇವೆಲ್ಲವೂ ಮಠದ ಆಸ್ತಿಗಳೇ ಆಗಿರುತ್ತವೆ ಎಂದು ಸ್ಪಷ್ಟಪಡಿಸಿದ ಶ್ರೀಗಳು ನಾವು ಪೀಠಕ್ಕೆ ಬಂದ ನಂತರ ಯಾವುದೇ ಆಸ್ತಿಗಳ ಪರಭಾರೆ ಮಾಡಿಲ್ಲ. ಕೆಲವರು ಹುಟ್ಟುಹಾಕುತ್ತಿರುವ ಅಪಪ್ರಚಾರಳಿಗೆ ಸಾಕ್ಷ್ಯ ನೀಡುವಂತೆ ಭಕ್ತರು ಪ್ರಶ್ನೆ ಮಾಡಬೇಕು ಎಂದರು.ವಿದೇಶದಲ್ಲಿ ವ್ಯಾಸಂಗ ಮಾಡಲು ನಮಗೆ ಶಿಷ್ಯ ವೇತನ ದೊರಕಿತ್ತು. ಮಠದ ಹಣವನ್ನು ನಮ್ಮ ವ್ಯಾಸಂಗಕ್ಕೆ ಬಳಸಿಕೊಂಡಿಲ್ಲ. ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದರೂ ನಿರಂತರ ಆರೋಪಗಳನ್ನು ಕೆಲವರು ಮಾಡುತ್ತಾರೆ. ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ನೀಡಿರುವ ₹25 ಲಕ್ಷ ಹಣವು ಅಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಬಳಕೆಯಾಗುತ್ತಿದೆ ಎಂದರು.ಮಠದ ಪ್ರಾತಿನಿಧಿಕ ಸಂಸ್ಥೆಯಾದ ಸಾಧು ಸದ್ಧರ್ಮ ವೀರಶೈವ ಸಂಘವು ೧೦೧ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಮಠದ ವಿರುದ್ಧ ದೂರುಗಳು ಇದ್ದಲ್ಲಿ ಪರಿಶೀಲಿಸಲು ಸಂಘಕ್ಕೆ ತಿಳಿಸಬಹುದು. ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹೊಣೆ ಸಾಧು ಸದ್ಧರ್ಮ ಸಂಘ ಮತ್ತು ಭಕ್ತರ ಮೇಲಿದೆ. ಅವರು ಆಯ್ಕೆ ಮಾಡಿ ನಮ್ಮ ಸಹಮತ ಪಡೆಯಬೇಕಷ್ಟೆ ಎಂದು ಸ್ಪಷ್ಟಪಡಿಸಿದರು.ಮಠದ ವಿರುದ್ಧ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ, ಶ್ರೀಗಳ ಬಗ್ಗೆ ಆಡಿರುವ ಮಾತುಗಳ ಅಪೇಕ್ಷಣೀಯವಲ್ಲ. ಅವು ಅವರ ಘನತೆಗೆ ತಕ್ಕುದಾದಲ್ಲ. ಅರಮನೆಗಳು ಅಸ್ತಿತ್ವ ಕಳೆದುಕೊಂಡಿದ್ದರೂ ಗುರುಮನೆಗಳಿಗೆ ಜನರು ತಮ್ಮ ಶ್ರದ್ಧಾ ಭಕ್ತಿ ತೋರುತ್ತಾರೆ. ರಾಜಕಾರಣಿಗಳು 5 ವರ್ಷಗಳ ನಂತರ ಮಾಜಿಯಾಗುತ್ತಾರೆ ಎಂದರು.ನೆಲ್ಲಿಕಂಬ ಗ್ರಾಮದ ಮಂಜುನಾಥ್‌, ಭೀಮಸಮುದ್ರದ ಜಯಪ್ಪ, ಹರಪನಹಳ್ಳಿಯ ಶ್ರೀನಿವಾಸ, ಕೆಂಚನಗೌಡ, ಹಿರೇಕಂದವಾಡಿ ಈಶ್ವರಪ್ಪ, ಹೆಮ್ಮನಬೇತೂರು ಚಿದಾನಂದ, ಹರಪನಹಳ್ಳಿಯ ನಿವೃತ್ತ ಇಂಜಿನಿಯರ್‌ ನಾಗರಾಜ್‌, ಮಹಾಬಲೇಶ್ವರಗೌಡ ಮುಂತಾದವರು ಮಾತನಾಡಿ ಶ್ರೀಗಳಿಗೆ ತಮ್ಮ ನೈತಿಕ ಬೆಂಬಲ ಘೋಷಿಸಿದರು. ಶ್ರೀಗಳು ತೆಗೆದುಕೊಳ್ಳುವ ಯಾವುದೇ ನಿರ್ಣಯಗಳಿಗೆ ಭಕ್ತರು ಅಚಲವಾಗಿ ಬೆನ್ನಿಗೆ ನಿಲ್ಲುತ್ತೇವೆಂದು ಘೋಷಿಸಿದರು.

ವೇದಿಕೆಯಲ್ಲಿ ಡಾ. ಮೂಗನಗೌಡ, ಭೀಮಮುದ್ರದ ಜಿ.ಎಸ್.‌ ಅನಿತ್‌, ಉದ್ಯಮಿ ಬಿ.ಟಿ. ಪುಟ್ಟಪ್ಪ ಮುಂತಾದವರು ಇದ್ದರು.-----ಚಿತ್ರ: ಸಿರಿಗೆರೆಯ ಗುರುಶಾಂತರಾಜ ದೇಶಿಕೇಂದ್ರ ದಾಸೋಹ ಮಂಟಪದಲ್ಲಿ ನಡೆದ ಮಠದ ಭಕ್ತರ ಸಭೆಯಲ್ಲಿ ತರಳಬಾಳು ಶ್ರೀಗಳು ಆಶೀರ್ವಚನ ನೀಡಿದರು.