ಹೇಮಾವತಿ ನದಿಯ ಪಾವಿತ್ರ್ಯ, ಪರಿಸರ ಸಂರಕ್ಷಣೆ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕೃತ್ಯದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ. ಜತೆಗೆ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಹಾಗೂ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.

ಕನ್ನಡಪ್ರಭವಾರ್ತೆ, ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮಣೇಶ್ವರಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪ ಹೇಮಾವತಿ ನದಿಗೆ ಕರುಗಳ ಕಳೇಬರ, ತ್ಯಾಜ್ಯ ಮತ್ತು ಮೂಳೆಗಳನ್ನು ಎಸೆಯುತ್ತಿರುವ ಘಟನೆ ಕಂಡು ಬಂದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿ ಇರುವ ಅಕ್ರಮ ಕಸಾಯಿಖಾನೆಯಲ್ಲಿ ಉಳಿಯುವ ಗೋಮಾಂಸ, ಮೂಳೆಗಳು ಮತ್ತು ಸತ್ತ ಜಾನುವಾರುಗಳ ಕಳೇಬರಗಳನ್ನು ಮೂಟೆಗಳಲ್ಲಿ ಕಟ್ಟಿ ರಾತ್ರೋರಾತ್ರಿ ಹೇಮಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ತಡೆಗೋಡೆ ಮೇಲಿಂದ ಹಾಗೂ ನದಿಯ ದಂಡೆಗಳಲ್ಲಿ ಎಸೆಯಲಾಗುತ್ತಿದೆ.

ನಗರ ಪೊಲೀಸ್ ಠಾಣೆಯಿಂದ ಕೇವಲ ೪೦೦ ಮೀಟರ್‌ ದೂರದ ಅಕ್ರಮ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಯುತ್ತಲೇ ಇದೆ. ೨ ವರ್ಷಗಳ ಹಿಂದೆ ಒಂದೆರಡು ಸಲ ದಾಳಿ ನಡೆಸಿದ್ದು ಬಿಟ್ಟರೆ ತಡೆಗೆ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಹೇಮಾವತಿ ನದಿಯ ನೀರು ಹಾಸನ ಜಿಲ್ಲೆ ಮಾತ್ರವಲ್ಲದೆ ಮಂಡ್ಯ, ಮೈಸೂರು ಭಾಗದ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಕಳೇಬರಗಳು ಕೊಳೆತು ದುರ್ನಾತ ಬೀರುತ್ತಿರುವುದು ಹಾಗೂ ನೀರು ಕಲುಷಿತಗೊಳ್ಳುತ್ತಿರುವುದು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟುಹಾಕಿದೆ.

ಹೇಮಾವತಿ ನದಿಯ ಪಾವಿತ್ರ್ಯ, ಪರಿಸರ ಸಂರಕ್ಷಣೆ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕೃತ್ಯದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ. ಜತೆಗೆ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಹಾಗೂ ಹಿಂದೂಪರ ಸಂಘಟನೆಗಳು

ಒತ್ತಾಯಿಸಿವೆ. ಈ ಸಂಘಟನೆಗಳು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನದಿಯ ತಡೆಗೋಡೆ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು, ರಾತ್ರಿ ಗಸ್ತು ಹೆಚ್ಚಿಸುವುದು ಹಾಗೂ ಅಕ್ರಮವಾಗಿ ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.