ಸಾರಾಂಶ
ಕಳೆದ ಎರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹ ಸ್ವಲ್ಪ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ಸೇತುವೆ ಸೋಮವಾರ ಬೆಳಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಗೋಕಾಕ
ಕಳೆದ ಎರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹ ಸ್ವಲ್ಪ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ಸೇತುವೆ ಸೋಮವಾರ ಬೆಳಗ್ಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತವಾಗಿದೆ.ಘಟಪ್ರಭ ನದಿ ಅಪಾಯಮಟ್ಟ ಮಿರಿ ಹರಿದ ಪರಿಣಾಮ ನಗರದ ಹಳೆ ದನಗಳ ಪೇಠೆ, ಉಪ್ಪಾರ ಓಣಿ, ಡೋರ ಗಲ್ಲಿ, ದಾಳಂಬ್ರಿ ತೋಟ, ಕುಂಬಾರ ಓಣಿ, ಸೇರಿದಂತೆ ಇತರ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ನುಗ್ಗಿದ ನೀರಿನ ಪ್ರಮಾಣ ಸೋಮವಾರದಂದು ಸ್ವಲ್ಪ ಕಡಿಮೆಯಾಗಿದ್ದು, ಗೋಕಾಕ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.
200ಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಕಾಳಜಿ ಕೆಂದ್ರಗಳಲ್ಲಿಯೇ ಆಶ್ರಯ ಪಡೆದಿದ್ದು, ನೀರು ಸಂಪೂರ್ಣ ಕಡಿಮೆಯಾಗುವವರೆಗೆ ಯಾರೂ ಮನೆಗಳಿಗೆ ಹೋಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ತಹಸೀಲ್ದಾರ್ ಡಾ.ಮೋಹನ್ ಭಸ್ಮೆ ಪ್ರವಾಹ ಪೀಡಿತ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಳಜಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ಜನರಿಗೆ ಮೂಲ ಸೌಕರ್ಯಗಳೊಂದಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿದ್ದು, ಅವರ ಆರೈಕೆ ಇಂದು ಮುಂದುವರೆದಿದೆ.ಬಹಳ ಹಳೆಯದಾಗಿರುವ ಚಿಕ್ಕಹೊಳಿ ಸೇತುವೆ ಮೇಲೆ ನೀರು ನಿಂತ ಪರಿಣಾಮ ಸೇತುವೆ ದಡದ ಭಾಗದಲ್ಲಿ ಸಣ್ಣ ಪ್ರಮಾಣದ ಹಾನಿ ಸಂಭವಿಸಿದ್ದು, ಸೋಮವಾರ ಬೆಳಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಚಿಕ್ಕೋಳಿ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಸೇತುವೆ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಚಿಕ್ಕೋಳಿ ಸೇತುವೆಯ ದುರುಸ್ತಿಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಚಿಕ್ಕೋಳಿ ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಸಂಚಾರಕ್ಕೆ ಮುಕ್ತವಾಗದ ಲೋಳಸೂರ ಸೇತುವೆ: ಎರಡು ದಿನಗಳಿಂದ ಮಳೆ ಪ್ರಮಾಣ ಕಡಮೆಯಾಗಿದ್ದರೂ ಲೋಳಸೂರ ಸೇತುವೆ ಮೇಲಿನ ನೀರು ಕಡಿಮೆಯಾಗಿಲ್ಲ. ಸೇತುವೆ ಮೇಲೆ ಯಾರೂ ತೆರಳದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾದರೆ ಇನ್ನೆರಡು ದಿನಗಳವರೆಗೆ ಲೋಳಸೂರ ಸೇತುವೆ ಮೇಲಿನ ನೀರು ಕಡಿಮೆಯಾಗುವ ನಿರೀಕ್ಷೆ ಇದೆ.