ಸ್ಲೋ ಬೈಕ್ ಸ್ಪರ್ಧೆಯಿಂದ ಏಕಾಗ್ರತೆ ವೃದ್ಧಿ

| Published : May 14 2024, 01:01 AM IST

ಸಾರಾಂಶ

ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಕ್ರೀಡೆಯೂ ಇತ್ತಿಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಹೆಚ್ಚಿನ ಪ್ರಮಾಣದಲ್ಲಿ ಜನಮನ ಗಳಿಸುತ್ತಿದೆ

ರೋಣ: ಸ್ಲೋ ಬೈಕ್‌ ಓಡಿಸುವ ಸ್ಪರ್ಧೆ ಅತ್ಯಂತ ಕಲಾ ಮತ್ತು ಕ್ರಿಯಾತ್ಮಕತೆಯಿಂದ ಕೂಡಿದ್ದು, ಇದು ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದರ ಜತೆಗೆ ಏಕಾಗ್ರತೆ ವೃದ್ಧಿಸುತ್ತದೆ ಎಂದು ಹೊಸಳ್ಳಿ ಗ್ರಾಪಂ ಸದಸ್ಯ ಬಸವರಡ್ಡಿ ರಡ್ಡೇರ ಹೇಳಿದರು.

ಅವರು ಸೋಮವಾರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಶ್ರೀಬಸವೇಶ್ವರ ಯುವಕ ಮಂಡಳ ವತಿಯಿಂದ ಏರ್ಪಡಿಸಲಾಗಿದ್ದ ಸ್ಲೋ ಬೈಕ್‌ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ಹಲವಾರು ವಿಧಗಳಿವೆ. ಅವು ಮಾನಸಿಕ ಮತ್ತು ದೈಹಿಕ ಸದೃಢರನ್ನಾಗಿಸುತ್ತವೆ. ಅಂತೆಯೇ ಸ್ಲೋ ಬೈಕ್ ಓಡಿಸುವ ಸ್ಪರ್ಧೆ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಕ್ರೀಡೆಯೂ ಇತ್ತಿಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಹೆಚ್ಚಿನ ಪ್ರಮಾಣದಲ್ಲಿ ಜನಮನ ಗಳಿಸುತ್ತಿದೆ. ಬೈಕನ್ನು ಅತೀ ಹೆಚ್ಚಿನ ಅವಧಿಯಲ್ಲಿ ಕಡಿಮೆ ದೂರ ಕ್ರಮಿಸಿದವರು ಈ ಕ್ರೀಡೆಯಲ್ಲಿ ವಿಜೇತರಾಗುತ್ತಾರೆ. ಬೈಕ್ ಸವಾರಿ ಮಾಡುವ ಕ್ರೀಡಾಪಟು‌ ಚಾಣಾಕ್ಷನಾಗುವುದರ ಜತೆಗೆ ಏಕಾಗ್ರತೆಯಿಂದ ಬೈಕ್ ಬ್ಯಾಲನ್ಸ್‌ ಮಾಡುತ್ತಾ ನಿಧಾನವಾಗಿ ಯಾವುದೇ ರೀತಿಯ ವಿಫಲತೆ ಕಾಣದೆ ಸಾಗಬೇಕು. ಇದಕ್ಕೆ ಏಕಾಗ್ರತೆ ಅತೀ ಮುಖ್ಯವಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶಿವ ಜುಮ್ಮನಗೌಡ್ರ ಮಾತನಾಡಿ, ಬೆಳೆಯುತ್ತಿರುವ ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ ಕಬಡ್ಡಿ, ಖೋಖೋ, ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆ ಸೇರಿದಂತೆ ಅನೇಕ ಅಪ್ಪಟ ಗ್ರಾಮೀಣ ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಅದರಲ್ಲೂ ಯಂತ್ರಗಳ ಅತೀಯಾದ ಬಳಕೆಯಿಂದ ದೈಹಿಕ ಶ್ರಮ ಇಲ್ಲದಂತಾಗಿದ್ದು, ಇದರಿಂದ ದೈಹಿಕ‌ ಮತ್ತು ಮಾನಸಿಕ ಸದೃಢತೆಗೆ ಅವಕಾಶ ಸಿಗದಂತಾಗಿದೆ. ಕ್ರೀಡೆಗಳು ಏಕಾಗೃತೆ ವೃದ್ಧಿಸುವುದರ ಜತೆಗೆ ಲವಲವಿಕೆ ಮತ್ತು ಸದಾ ಆರೋಗ್ಯಯುತರನ್ನಾಗಿ ಇರುವಂತೆ ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ನಿತ್ಯ ಯೋಗ, ವ್ಯಾಯಾಮದ ಜತೆಗೆ ಒಂದಿಲ್ಲೊಂದು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಈ ವೇಳೆ ಗ್ರಾಪಂ ಸದಸ್ಯ ಬಸವರಾಜ ಮಾರನಬಸರಿ, ಮಲ್ಲಿಕಾರ್ಜುನ .ವ್ಹಿ.ರಡ್ಟೇರ, ಬಸವರಾಜ ಅಂಗಡಿ, ಮಲ್ಲು ಮಾದರ, ಪರಶು ಮಾದರ, ಶಿವು ಬೋಯಿಟೆ, ಶಿವಲಿಂಗಯ್ಯ ಸ್ಥಾವರಮಠ, ಬಸವರಾಜ ಕುಂದಗೋಳ, ಬಾಬು ಘೋರ್ಪಡೆ, ಬಸವರಡ್ಡಿ ರಡ್ಡೇರ, ಮಲ್ಲಯ್ಯ ಸ್ಥಾವರಮಠ, ಯಮನೂರ ಮಾದರ, ಶರಣಪ್ಪ ಉಪ್ಪಾರ, ಪರಶುರಾಮ ಕುರಿ, ಶರಣಪ್ಪ ತಳವಾರ, ಅಶೋಕ ಅಂಗಡಿ, ರಾಜೇಸಾಬ ಪಿಂಜಾರ, ಲಕ್ಷ್ಮಣ ಕುರಿ, ಕಳಕಪ್ಪ ಅಬ್ಬಿಗೇರಿ, ಸಚಿನ ಇಟಗಿ, ಶರಣಪ್ಪ ಉಪ್ಪಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.