ಮಂಗಳೂರು ವಿಭಾಗದಲ್ಲಿ ತೆರಿಗೆ ಸಂಗ್ರಹದಲ್ಲಿ ಕುಂಠಿತ ಪ್ರಗತಿ: ಜಂಟಿ ಆಯುಕ್ತ ಕುಮಾರ್‌

| Published : Nov 15 2024, 12:34 AM IST

ಮಂಗಳೂರು ವಿಭಾಗದಲ್ಲಿ ತೆರಿಗೆ ಸಂಗ್ರಹದಲ್ಲಿ ಕುಂಠಿತ ಪ್ರಗತಿ: ಜಂಟಿ ಆಯುಕ್ತ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ಕೆಸಿಸಿಐ) ಆಶ್ರಯದಲ್ಲಿ ಬುಧವಾರ ‘ಬಡ್ಡಿ ಮತ್ತು ದಂಡ ರಿಯಾಯಿತಿಗಾಗಿ ಜಿಎಸ್‌ಟಿ ಅಡಿ ಹೊಸ ಕರ ಸಮಾಧಾನ ಯೋಜನೆ’ ಕುರಿತು ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ತೆರಿಗೆ ಸಂಗ್ರಹದಲ್ಲಿ ಪ್ರಗತಿಯಾಗಿದ್ದರೂ ಮಂಗಳೂರು ವಿಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ರಾಜ್ಯ ಸರಕು ಮತ್ತು ಸೇವೆ ತೆರಿಗೆ ಇಲಾಖೆಯ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಕುಮಾರ್‌ ವಿ. ಹೇಳಿದ್ದಾರೆ.ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ಕೆಸಿಸಿಐ) ಆಶ್ರಯದಲ್ಲಿ ಬುಧವಾರ ನಡೆದ ‘ಬಡ್ಡಿ ಮತ್ತು ದಂಡ ರಿಯಾಯಿತಿಗಾಗಿ ಜಿಎಸ್‌ಟಿ ಅಡಿ ಹೊಸ ಕರ ಸಮಾಧಾನ ಯೋಜನೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ದರ ಶೇ. 11ರಿಂದ ಶೇ 12ರಷ್ಟು ಬೆಳವಣಿಗೆ ಕಂಡಿದೆ. ಆದರೆ ವಾಣಿಜ್ಯ ಚಟುವಟಿಕೆಯ ತಾಣವಾಗಿರುವ ಮಂಗಳೂರು ತೆರಿಗೆ ಸಂಗ್ರಹದ ವಿಚಾರದಲ್ಲಿ ಹಿಂದೆ ಉಳಿಯ ಬಾರದು. ನಗರದ ಉದ್ದಿಮೆದಾರರು ಹಾಗೂ ವರ್ತಕರು ಜಿಎಸ್‌ಟಿಯಡಿ ಆರಂಭಿಸಿರುವ ಕರ ಸಮಾಧಾನ ಯೋಜನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.ಪಶ್ಚಿಮ ವಲಯದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಲಕ್ಷಪತಿ ನಾರಾಯಣ ನಾಯ್ಕ್‌ ಮಾತನಾಡಿ, ಕರ್ನಾಟಕ ಮಾರಾಟ ತೆರಿಗೆ ಜಾರಿಯಾದ ಕಾಲದಿಂದ ರಾಜ್ಯದಲ್ಲಿ ಕರ ಸಮಾಧಾನ ಯೋಜನೆ ಇದೆ. 2005ರಲ್ಲಿ ಮೌಲ್ಯ ವರ್ಧಿತ ತೆರಿಗೆ ಪದ್ಧತಿ ಜಾರಿಯಾದಾಗಲೂ ಇದನ್ನು ಮುಂದುವರಿಸಲಾಗಿತ್ತು. ಜಿಎಸ್‌ಟಿ ಜಾರಿಗೆ ಬಂದಾಗ ವಾಣಿಜ್ಯ ತೆರಿಗೆ ಪಾವತಿಯ ಲೋಪಗಳಿತ್ತು. ಅವುಗಳನ್ನು ಸರಿಪಡಿಸಲು ಆಗ್ರಹಿಸಿ ಉದ್ಯಮಿಗಳು ವಾಣಿಜ್ಯ ತೆರಿಗೆ ಕಚೇರಿಗಳ ಬಳಿ ಸಾಲು ಗಟ್ಟಿನಿಲ್ಲುವ ಸ್ಥಿತಿ ಎದುರಾಯಿತು. ಈಗ ಜಿಎಸ್‌ಟಿಯಲ್ಲೂ ಕರ ಸಮಾಧಾನ ಜಾರಿಯಾಗಿದೆ ಎಂದರು.

ಜಿಎಸ್‌ಟಿಯ ಹೊಸ ಕರ ಸಮಾಧಾನ ಯೋಜನೆ ಬಗ್ಗೆ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ (ಲೆಕ್ಕಪರಿಶೋಧನೆ) ಮಹೇಶ್‌ ಎನ್‌ ಬಗಿಲ್‌, ಇ ವೇ ಬಿಲ್‌ ಪಾವತಿಯ ವೇಳೆ ಆಗುವ ಲೋಪಗಳ ಬಗ್ಗೆ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಕೆ.ಪಿ. ಸುಬ್ಬಯ್ಯ, ಜಿಎಸ್‌ಟಿ ಕೌನ್ಸಿಲ್‌ನ 53 ಮತ್ತು 54ನೇ ಸಭೆಗಳಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಸಂಜಯ ಬಲಿಪ ಮಾತನಾಡಿದರು. ಸಂಸ್ಥೆಯ ಜಿಎಸ್‌ಟಿ ಉಪ ಸಮಿತಿ ಅಧ್ಯಕ್ಷ ಕೇಶವ ಎನ್‌.ಬಳ್ಳಕುರಾಯ ಪ್ರಸ್ತಾವಿಕ ಮಾತನಾಡಿದರು. ಕೆಸಿಸಿಐ ಅಧ್ಯಕ್ಷ ಆನಂದ ಜಿ. ಪೈ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿನ್‌ ಪೈ ಮಾರೂರು ವಂದಿಸಿದರು. ಮೈತ್ರೇಯ ನಿರೂಪಿದರು.