ಮನೆ ನಿರ್ಮಾಣದ ಬಾಕಿ ಬಿಲ್ಲನ್ನು ಬೇಗನೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಕೊಳಗೇರಿ ನಿವಾಸಿಗಳ ನಿಯೋಗವು ಮಂಗಳವಾರ ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಹಳಿಯಾಳ

ಮನೆ ನಿರ್ಮಾಣದ ಬಾಕಿ ಬಿಲ್ಲನ್ನು ಬೇಗನೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಕೊಳಗೇರಿ ನಿವಾಸಿಗಳ ನಿಯೋಗವು ಮಂಗಳವಾರ ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಬಾಕಿ ಬಿಲ್ ನೀಡಿ:

ಕಳೆದ ನಾಲ್ಕು ವರ್ಷಗಳ ಹಿಂದೇ ಕೊಳಗೇರಿ ಮಂಡಳಿಯಿಂದ ಮನೆ ಮಂಜೂರಾಗಿದ್ದು, ಅದರಂತೆ ನಾವು ಸಾಲ ಮಾಡಿ ಮನೆ ನಿರ್ಮಾಣ ಮಾಡಿದ್ದೆವೆ, ಆದರೆ ಈವರೆಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇವಲ ಆರಂಭದ ಕಂತಿನ ಬಿಲ್ ಬಿಡುಗಡೆಯಾಗಿದ್ದು, ಸುಮಾರು 40ರಿಂದ 45 ಫಲಾನುಭವಿಗಳಿಗೆ ಇನ್ನೂವರೆಗೂ ₹85ಸಾವಿರ ಬಿಲ್ ಬಿಡುಗಡೆಯಾಗಿರುವುದಿಲ್ಲ. ಅದಲ್ಲದೇ ಕಟ್ಟಡ ನಿರ್ಮಾಣದ ಕಾರ್ಮಿಕರ ಬಿಲ್ ₹55ಸಾವಿರ ಮತ್ತು ಇಟ್ಟಂಗಿ ಬ್ಲಾಕ್ ಬಿಲ್ ₹23ಸಾವಿರ ಬಿಡುಗಡೆ ಮಾಡದೇ ಅನ್ಯಾಯವೆಸಗಿದ್ದಾರೆ. ಇಲಾಖೆಯ ವಿಳಂಬ ಧೋರಣೆಯ ಪರಿಣಾಮ ಮನೆಗಳ ನಿರ್ಮಾಣಕ್ಕೆ ಸಾಲ ನೀಡಿದವರು ಪ್ರತಿನಿತ್ಯ ಸಾಲ ವಸೂಲಿಗಾಗಿ ಮನೆಗೆ ಬಂದು ಹೋಗುತ್ತಿರುವುದರಿಂದ ಸಾಲದಿಂದ ಮನೆ ನಿರ್ಮಾಣ ಮಾಡಿದ ನಮಗೆಲ್ಲಾ ಮನೆಯಲ್ಲಿ ಶಾಂತಿ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ. ದೂರು ದಾಖಲು:

ಕೊಳಗೇರಿ ಇಲಾಖೆಯವರ ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತು ಹಳಿಯಾಳ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಲಾಗಿತ್ತು. ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಠಾಣೆಗೆ ಬಂದು ಬಿಲ್ ಪಾವತಿಸಲು ಕೇಳಿದ ಹದಿನೈದು ದಿನಗಳ ಗಡವು ಸಹ ಮೀರಿ ಹೋಗಿದೆ, ಇನ್ನೂವರೆಗೂ ಬಾಕಿ ಬಿಲ್ ಪಾವತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಮನೆ ನಿರ್ಮಾಣದ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೇ ಜ. 12ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಡಾ. ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣದ ಉತ್ತರ ಕರ್ನಾಟಕದ ಅಧ್ಯಕ್ಷ ಕಲ್ಲಪ್ಪ ಕಾದ್ರೋಳ್ಳಿ ನಿಯೋಗದ ಮುಂದಾಳತ್ವ ವಹಿಸಿದ್ದ. ಉತ್ತರ ಕನ್ನಡ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಅಬ್ದುಲ ರೆಹಮಾನ ಜಂಬೂವಾಲೆ, ದೇಶಪಾಂಡೆ ಆಶ್ರಯ ನಗರದ ಪುರಸಭಾ ಸದಸ್ಯೆ ಶಮೀಮಬಾನು, ರೇಣುಕಾ ಬಗರಿಕರ, ಸವಿತಾ ಬಾಗಲೇ, ಶಿಲ್ಪಾ ವಡ್ಡರ, ಚಂದಾ ಗೊಂದಳಿ, ಲಕ್ಷ್ಮೀ ಗೊಂದಳಿ, ಪರಶುರಾಮ ಬಗರಿಕರ ಹಾಗೂ ಕೊಳಗೇರಿ ನಿವಾಸಿಗಳು ಇದ್ದರು.