ಸ್ಲಂ ಮುಕ್ತ ನಗರವೇ ನಮ್ಮ ಗುರಿ

| Published : Mar 18 2025, 12:34 AM IST

ಸಾರಾಂಶ

ಕನ್ನಪ್ರಭ ವಾರ್ತೆ ವಿಜಯಪುರ ಸ್ಲಂ ಮುಕ್ತ ನಗರ ಮಾಡುವುದು ನಮ್ಮ ಗುರಿಯಾಗಿದ್ದು, ಸ್ಲಂ ಪ್ರದೇಶದಲ್ಲಿ ಹೊಸ ಮನೆಗಳನ್ನು ನಿರ್ಮಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

ಕನ್ನಪ್ರಭ ವಾರ್ತೆ ವಿಜಯಪುರ

ಸ್ಲಂ ಮುಕ್ತ ನಗರ ಮಾಡುವುದು ನಮ್ಮ ಗುರಿಯಾಗಿದ್ದು, ಸ್ಲಂ ಪ್ರದೇಶದಲ್ಲಿ ಹೊಸ ಮನೆಗಳನ್ನು ನಿರ್ಮಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

ನಗರ ಮತಕ್ಷೇತ್ರದ ಇಬ್ರಾಹಿಂಪುರ ಭಜಂತ್ರಿ ಓಣಿ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಹೊಸ ಮನೆ ಪಡೆಯಲು ಫಲಾನುಭವಿಗಳು ₹1 ಲಕ್ಷ ತುಂಬಿದರೆ, ಸರ್ಕಾರ ಪ್ರತಿ ಫಲಾನುಭವಿಗೆ ₹6 ಲಕ್ಷ ನೀಡುತ್ತದೆ. ಒಟ್ಟು ₹7 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸ್ವಂತ ಮನೆ ನಿಮ್ಮದಾಗಲಿದೆ. ಸರ್ಕಾರದಿಂದ ಘೋಷಣೆಯಾಗಿರುವ ಇಬ್ರಾಹಿಂಪುರ ಸ್ಲಂ ಪ್ರದೇಶದಲ್ಲಿ ಈಗಾಗಲೇ ಸ್ಲಂ ಬೋರ್ಡ್ ನಡೆಸಿದ ಸರ್ವೇ ಪ್ರಕಾರ 167 ಮನೆಗಳಿದ್ದು, ಈಗ 74 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದವರು ಸ್ಲಂ ಬೋರ್ಡ್‌ಗೆ ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿದರೆ ಅವರಿಗೂ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದರು.ಬಡವರಿಗೆ ತಮ್ಮ ಪಾಲಿನ ₹1 ಲಕ್ಷ ತುಂಬುವುದು ಸಹ ಕಷ್ಟವೆನಿಸಿದರೆ, ಅಂಥವರಿಗೆ ಬ್ಯಾಂಕ್‌ನಿಂದ ಸಾಲ ಒದಗಿಸಲಾಗುತ್ತದೆ. ಒಂದು ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದರೆ (ದೊಡ್ಡ ಕುಟುಂಬವಿದ್ದರೆ) ಅಂಥವರಿಗೆ ಜಿ+1 ಮನೆ ನಿರ್ಮಿಸಿ ಕೊಡಲಾಗುವುದು. ಸ್ಲಂ ನಿವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ, ರಾಜಶೇಖರ ಕುರಿಯವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್ಟಿ ಮೋರ್ಚಾ ಅಧ್ಯಕ್ಷ ಪ್ರವೀಣ ನಾಟೀಕಾರ, ಇಬ್ರಾಹಿಂಪುರ ಬಡಾವಣೆ ಮುಖಂಡರಾದ ಶಿವಸಂಗಪ್ಪ ಹಳ್ಳಿ, ಶಾಂತೂ ಗಲಗಲಿ, ಮಹಾಂತೇಶ ಹಳ್ಳಿ, ಪ್ರವೀಣ ಹಳ್ಳಿ, ಮಡಿವಾಳ ಯಾಳವಾರ, ದೇವೇಂದ್ರ ಹೆಳವರ, ಕಿರಣ ಘಂಟಿ, ವಿಜಯ ಭಜಂತ್ರಿ, ತಿಪ್ಪಣ್ಣ ಕಮಲದಿನ್ನಿ, ಅಶೋಕ ಭಜಂತ್ರಿ, ಅಶೋಕ ನಾಯ್ಕೋಡಿ, ರಂಗವ್ವ ಕಾಖಂಡಕಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಾನಂದ ರಾಠೋಡ, ಸಿಬ್ಬಂದಿ ಪ್ರಲ್ಹಾದ ಪಾಟೀಲ, ಮೀನಾಕ್ಷಿ ಚೂರಿ, ಗುರು ಬೆಂಕಿ ಮುಂತಾದವರು ಹಾಜರಿದ್ದರು.

ಕೋಟ್‌

ನಗರಕ್ಕೆ ಎರಡ್ಮೂರು ತಿಂಗಳಲ್ಲಿ 1000 ಮನೆಗಳು ಮಂಜೂರಾಗಲಿದ್ದು, ಅದರಲ್ಲಿ ಇಬ್ರಾಹಿಂಪುರ ಸ್ಲಂ ನಿವಾಸಿಗಳಿಗೂ ಮನೆಗಳನ್ನು ಕಟ್ಟಿಸಿ ಕೊಡಲಾಗುವುದು. ಸ್ಲಂ ನಿವಾಸಿಗಳು ಎಲ್ಲರೂ ಒಟ್ಟಿಗೆ ತಮ್ಮ ಪಾಲಿನ ತಲಾ ₹ 1 ಲಕ್ಷ ಹಣ ತುಂಬಿದರೆ, ಸ್ಲಂ ಬೋಡ್೯ದಿಂದ ಮೂರು ತಿಂಗಳಲ್ಲಿ ಮನೆ ನಿರ್ಮಿಸಿ, ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಮಾಡಿಕೊಡಲಾಗುವುದು. ಇದೊಂದು ಮಾದರಿ ಬಡಾವಣೆಯಾಗುತ್ತದೆ. ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಿ.

ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕರು.