ಸಾರಾಂಶ
ಗದಗ: ಗದಗ-ಬೆಟಗೇರಿ ನಗರದಲ್ಲಿಯ ಸ್ಲಂ ಪ್ರದೇಶಗಳ ಅಭಿವೃದ್ಧಿ, ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸ್ಲಂ ಬೋರ್ಡ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸ್ಲಂ ಜನಾಂದೋಲನ- ಕರ್ನಾಟಕ ಮತ್ತು ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಗದಗ ಉಪ ವಿಭಾಗ ಸ್ಲಂ ಬೋರ್ಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ. ಆರ್.ಮಾನ್ವಿ ಮಾತನಾಡಿ, ಕಳೆದ 17 ವರ್ಷಗಳಿಂದ ಗದಗ ಜಿಲ್ಲೆ ಮತ್ತು ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶದ ಕುಟುಂಬಗಳ ವಸತಿ, ಮೂಲಭೂತ ಸೌಲಭ್ಯ, ಹಕ್ಕುಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನು ಹಲವಾರು ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಸ್ಲಂ ಜನರ ಪರ ಹೋರಾಟ ನಡೆಸಿ ಜಿಲ್ಲಾಧಿಕಾರಿ ಮತ್ತು ಸ್ಲಂ ಬೋರ್ಡ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ, ಆದರೆ ಜಿಲ್ಲಾಡಳಿತ ಮತ್ತು ಸ್ಲಂ ಬೋರ್ಡ ಅಧಿಕಾರಿಗಳು ಕೊಳಗೇರಿ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಅವಳಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಸ್ಥಳೀಯ ನಿವಾಸಿಗಳು ದಾಖಲೆಗಳೊಂದಿಗೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಠರಾವು ಪ್ರತಿ ಮತ್ತು ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿ ಸಲ್ಲಿಸಿ 3 ವರ್ಷ ಕಳೆದರೂ ಈವರೆಗೊ ಸ್ಲಂ ಘೋಷಣೆ ಕುರಿತು ಸ್ಲಂ ಬೋರ್ಡನಿಂದ ಅಗತ್ಯ ಕ್ರಮ ಕೈಗೊಳ್ಳದೇ ಸ್ಲಂ ಜನ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಅವಳಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಸರ್ಕಾರದ ಆದೇಶ ಗಾಳಿ ತೂರಿ ಕೆರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ, ಈ ಕುರಿತು ಅನೇಕ ಬಾರಿ ಹೋರಾಟ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದರೂ ರಾಜಾರೋಷವಾಗಿ ಮನೆಗಳ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರಿಗೆ ಅನೇಕ ಬಾರಿ ಇದರ ಬಗ್ಗೆ ನಮ್ಮ ಸಂಘಟನೆಯ ಮೂಲಕ ಎಚ್ಚರಿಕ್ಕೆ ನೀಡಿದರೂ ಸಹ ಸಂಘಟನೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ನೀಡದೇ ಕಾನೂನು ಉಲ್ಲಂಘಿಸಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜಯಡಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ನೀಡಲಾಗಿರುವ ಗುತ್ತಿದಾರರನ್ನು ಕೈ ಬಿಟ್ಟು ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕು ಆಗ್ರಹಿಸಿದರು.
ಲಕ್ಷ್ಮೇಶ್ವರ, ಮುಳಗುಂದ ಮತ್ತು ಜಿಲ್ಲೆಯ ವಿವಿಧೆಡೆ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಳಪೆಯಾಗಿದ್ದು, ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸದಿದ್ದರೆ ಲೋಕಾಯುಕ್ತ ತನಿಖೆಗೆ ಅಗ್ರಹಿಸಲಾಗುವುದು, ಸ್ಲಂ ಬೋರ್ಡ ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿಗಳು ಸ್ಲಂ ಪ್ರದೇಶದ ವಸತಿ ಹಕ್ಕು ಪತ್ರ ಹಾಗೂ ನಾಗರಿಕ ಸೌಲಭ್ಯ ಕಲ್ಪಿಸುವಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕುಮ್ಮಕ್ಕು ನೀಡುತ್ತಿರುವುದರಿಂದ ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಹಾಗೂ ಅಭಿವೃದ್ಧಿ ಯೋಜನೆಗಳು ಅರ್ಹ ಕೊಳಗೇರಿ ಪ್ರದೇಶಗಳಿಗೆ ಬಳಕೆಯಾಗದೇ ಇರುವುದು ಜೀವಂತ ಉದಾಹರಣೆಯಾಗಿದೆ. ಸರ್ಕಾರಗಳು ಜಾರಿಗೆ ತರುವ ವಸತಿ ಹಾಗೂ ವಿವಿಧ ಯೋಜನೆಗಳು ಪ್ರಾಮಾಣಿಕವಾಗಿ ಅರ್ಹ ಗುಡಿಸಲು ಪ್ರದೇಶದ ಕುಟುಂಬಗಳಿಗೆ ದೊರಕಿಸಿ ಕೊಡಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. 7 ದಿನದೊಳಗಾಗಿ ಸ್ಲಂ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತ ರಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಗದಗ ಉಪ ವಿಭಾಗ ಸ್ಲಂ ಬೋರ್ಡ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಮನವಿ ಮೂಲಕ ಎಚ್ಚರಿಸಿದರು.ಈ ಸಂದರ್ಭದಲ್ಲಿ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಂ ಮುಲ್ಲಾ, ಮೆಹರುನಿಸಾ ಢಾಲಾಯತ, ಮೆಹರುನಿಸಾ ಡಂಬಳ, ಮಲೇಶಪ್ಪ ಕಲಾಲ, ಸಲೀಮ ಹರಿಹರ, ಖಾಜೇಸಾಬ ಇಸ್ಮಾಯಿಲನವರ, ಸಾಕ್ರುಬಾಯಿ ಗೋಸಾವಿ, ಬಾಷಾಸಾಬ ಡಂಬಳ, ದಾದು ಗೋಸಾವಿ, ಶಿವಪ್ಪ ಲಕ್ಕುಂಡಿ, ಸಲೀಂ ಬೈರಕದಾರ, ಚಂದ್ರಿಕಾ ರೋಣದ, ಮಂಜುನಾಥ ಶ್ರೀಗಿರಿ, ಅಫ್ರೋಜಾ ಹುಬ್ಬಳ್ಳಿ, ಸುಸೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ತಿಪ್ಪಮ್ಮ ಕೊರವರ, ಕೌಸರ ಬೈರಕದಾರ, ವಿಶಾಲಕ್ಷಿ ಹಿರೇಗೌಡ್ರ, ನಗೀನಾ ಯಲಿಗಾರ, ಪೀರಮ್ಮ ನದಾಫ, ಜೈತುನಬಿ ಶಿರಹಟ್ಟಿ, ಲಕ್ಷ್ಮೀ ಮಣವಡ್ಡರ, ಶೋಭಾ ಹಿರೇಮಠ, ಮಕ್ತುಮಸಾಬ ಮುಲ್ಲಾನವರ, ದುರ್ಗಪ್ಪ ಮಣ್ಣವಡ್ಡರ ಹಾಗೂ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಇದ್ದರು.