ಸಾರಾಂಶ
ಹಿರೇಹಳ್ಳ ಜಲಾಶಯ ಲೋಕಾರ್ಪಣೆ
ಕರಿಯಣ್ಣ ಸಂಗಟಿಗೆ ಎಂಎಲ್ಸಿ ಪಟ್ಟಆಶ್ರಯ ಮನೆ ನೀಡಿದ್ದ ಜನನಾಯಕ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ತಮ್ಮ 93ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಕೊಪ್ಪಳ ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಇತ್ತು. ಇಲ್ಲಿಯ ರಾಜಕೀಯದ ಮೇಲೆ ಹಿಡಿತ ಸಾಧಿಸಿದ್ದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.ಜಿಲ್ಲೆಯ ರಾಜಕೀಯ ನಾಯಕರೊಂದಿಗೆ ಅಪಾರ ನಂಟು ಹೊಂದಿದ್ದರು. ಹೀಗಾಗಿಯೇ ಅವರು ಕೊಪ್ಪಳದ ರಾಜಕೀಯ ನಾಯಕರ ಮೇಲೆ ತಮ್ಮದೇ ಹಿಡಿತ ಸಾಧಿಸಿದ್ದರು.
ಗಂಗಾವತಿ ಎಚ್.ಜಿ. ರಾಮುಲು ಕುಟುಂಬದೊಂದಿಗೆ ವಿಶೇಷ ನಂಟು ಹೊಂದಿದ್ದ ಅವರು, ಕುರುಬ ಸಮುದಾಯದಲ್ಲಿ ಹೊಸ ನಾಯಕತ್ವವನ್ನು ಹುಟ್ಟು ಹಾಕಲು ಕರಿಯಣ್ಣ ಸಂಗಟಿ ಅವರನ್ನು ಖುದ್ದು ತಾವೇ ಕರೆದು ಎಂಎಲ್ಸಿ ಮಾಡಿದ್ದರು.ಹಿರೇಹಳ್ಳ ಜಲಾಶಯ:
ತಾಲೂಕಿನ ಕಿನ್ನಾಳ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯವನ್ನು ಮುತುವರ್ಜಿ ವಹಿಸಿ ಪೂರ್ಣಗೊಳಿಸುವುದಕ್ಕೆ ಕಾರಣವಾದರಲ್ಲದೆ ತಾವೇ 2001ರಲ್ಲಿ ಲೋಕಾರ್ಪಣೆ ಮಾಡಿದರು.ಹಿರೇಹಳ್ಳ ಜಲಾಶಯವನ್ನು ಲೋಕಾರ್ಪಣೆ ಮಾಡುವ ವೇಳೆ ಆಗಮಿಸಿದ್ದಾಗ ಜಿಲ್ಲೆಯಲ್ಲಿ ಇಡೀ ದಿನ ಇದ್ದರಲ್ಲದೆ ಇಲ್ಲಿಯ ರಾಜಕೀಯ ನಾಯಕರ ಪ್ರತ್ಯೇಕ ಸಭೆ ನಡೆಸಿದ್ದರು.
ಜಿಲ್ಲಾಡಳಿತ ಭವನ ನಿರ್ಮಾಣಕ್ಕೂ ಹೆಚ್ಚು ಆಸಕ್ತಿ ತೋರಿಸಿದ್ದರು. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಕಾರಣವಾಗಿದ್ದಾರೆ. ತಮ್ಮ ಅವಧಿಯುದ್ದಕ್ಕೂ ಸುಮಾರು 25 ಸಾವಿರ ಆಶ್ರಯ ಮನೆ ನೀಡಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸ್ಮರಿಸುತ್ತಾರೆ.ಕರಡಿ ಕರೆತರಲು ಯತ್ನ:
ತಾವೂ ಕಾಂಗ್ರೆಸ್ಸಿನಲ್ಲಿ ಇದ್ದರೂ ಸಹ ಜನತಾ ದಳದಲ್ಲಿದ್ದ ಕರಡಿ ಸಂಗಣ್ಣ ಅವರ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಜಿಲ್ಲೆಯ ಕಾಂಗ್ರೆಸ್ ನಾಯಕರು ಯಾವುದಾದರೂ ಯೋಜನೆಯನ್ನು ಜಿಲ್ಲೆಗೆ ತರಲು ಭೇಟಿಯಾಗಲು ಹೋದಾಗ ಕರಡಿಯನ್ನು ಕರೆದುಕೊಂಡು ಬನ್ನಿ ಎಂದು ಖುದ್ದು ಅವರೇ ಹೇಳುತ್ತಿದ್ದರು.ಜಿಲ್ಲಾಡಳಿತ ಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಗಣ್ಣ ಕರಡಿ ಅವರಿಗೆ ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗಲೇ ಕರೆ ಮಾಡಿ ಕಾಂಗ್ರೆಸ್ಸಿಗೆ ಬರುವಂತೆ ಆಹ್ವಾನ ನೀಡಿದ್ದರು. ಇದು ಆಗ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸಂಗಣ್ಣ ಕರಡಿ ಅವರು ವಿದ್ಯುತ್ ಸಮಸ್ಯೆ ಮುಂದಿಟ್ಟುಕೊಂಡು ನಗರದ ಕೆಇಬಿಯ ಎದುರಿಗೆ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದರು. ಇಡೀ ದಿನ ಉಪವಾಸ ಕುಳಿತಿದ್ದ ಸಂಗಣ್ಣ ಕರಡಿ ಅವರು ರಾತ್ರಿಪೂರ್ತಿ ಕಳೆದರೂ ಸಹ ತಮ್ಮ ನಿರಶನ ಹಿಂದೆ ಪಡೆಯದೆ ಮುಂದುವರೆಸಿದ್ದರು. ಆಗ ಎಸ್.ಎಂ. ಕೃಷ್ಣ ಬೆಳಗ್ಗೆಯೇ ವಿದ್ಯುತ್ ಲೋಡ್ ಶೆಡ್ಡಿಂಗ್ ಕಡಿತ ಮಾಡಿ, ಇಡೀ ರಾಜ್ಯಕ್ಕೆ ನಾಲ್ಕು ಗಂಟೆ ಹೆಚ್ಚು ವಿದ್ಯುತ್ ಪೂರೈಕೆಗೆ ಆದೇಶ ಮಾಡಿದ್ದರು. ಇದಾದ ಮೇಲೆ ಕರಡಿ ಸಂಗಣ್ಣ ಮತ್ತು ಎಸ್.ಎಂ. ಕೃಷ್ಣ ಅವರ ನಡುವೆ ಮತ್ತಷ್ಟು ಬಾಂಧವ್ಯ ಹೆಚ್ಚಳವಾಯಿತು. ಹೀಗಾಗಿ, ಕರಡಿ ಸಂಗಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ಜೋರಾಯಿತು. ಆದರೆ, ಕೃಷ್ಣ ಬಿಜೆಪಿ ಸೇರಿದ ಮೇಲೆ ಕರಡಿ ಕಾಂಗ್ರೆಸ್ ಸೇರಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಪಾಂಚಜನ್ಯ ಯಾತ್ರೆ ಮಾಡಿದಾಗ ಹಾಗೂ ಹಿರೇಹಳ್ಳ ಲೋಕಾರ್ಪಣೆ ಮಾಡುವ ವೇಳೆಯಲ್ಲಿ ಎಸ್.ಎಂ. ಕೃಷ್ಣ ಆಗಮಿಸಿದ್ದರು.