ಸಾರಾಂಶ
ನಾನು ಮೊದಲ ಬಾರಿ 1999ರಲ್ಲಿ ಶಾಸಕನಾದಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಅವರು ನನಗೆ ಬಹಳ ಮಾರ್ಗದರ್ಶನ ನೀಡಿದರು. ಅವರಿಂದ ನಾನು ಬಹಳ ಕಲಿತೆ ಎಂದು ಶಾಸಕ ಯೋಗೇಶ್ವರ್ ಸ್ಪರಿಸಿದರು.
ಚನ್ನಪಟ್ಟಣ : ನಾನು ಮೊದಲ ಬಾರಿ 1999ರಲ್ಲಿ ಶಾಸಕನಾದಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಅವರು ನನಗೆ ಬಹಳ ಮಾರ್ಗದರ್ಶನ ನೀಡಿದರು. ಅವರಿಂದ ನಾನು ಬಹಳ ಕಲಿತೆ ಎಂದು ಶಾಸಕ ಯೋಗೇಶ್ವರ್ ಸ್ಪರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಸದಾ ಹಸನ್ಮುಖಿಯಾಗಿರುತ್ತಿದ್ದರು. ಸಮಸ್ಯೆಗಳನ್ನು ಹೊತ್ತು ಹೋದಾಗ ಅದನ್ನು ಪರಿಹರಿಸುತ್ತಿದ್ದರು. ನನ್ನ ರಾಜಕೀಯ ಬೆಳವಣಿಗೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.ರಾಜ್ಯದ ಅಭಿವೃದ್ಧಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಅವಧಿಯಲ್ಲಿ ಕಾವೇರಿ ನಿಗಮ ಸ್ಥಾಪಿಸಿದರು.
ಈ ಭಾಗದ ನೀರಾವರಿ ಯೋಜನೆಗೆ ಆದ್ಯತೆ ನೀಡಿದರು. ತಾಲೂಕಿನ ಮೊದಲ ನೀರಾವರಿ ಯೋಜನೆಗೆ 10 ಕೋಟಿ ನೀಡಿದ್ದರು. ಅದನ್ನು ನೋಡಲು ಒಂದು ಬಾರಿ ಬಂದಿದ್ದರು. ನೀರಾವರಿ ಯೋಜನೆ ನೋಡಿ ಸಂತಸಪಟ್ಟಿದರು. ಅವರು ಪಕ್ಕದ ತಾಲೂಕಿನವರು, ಈ ಹಿನ್ನೆಲೆಯಲ್ಲಿ ಅವರು ನಮ್ಮವರೇ ಎಂಬ ಭಾವನೆ ತಾಲೂಕಿನ ಜನರಲ್ಲಿ ಇದೆ ಎಂದರು.
ಎಸ್.ಎಂ. ಕೃಷ್ಣ ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ಆದ್ದರಿಂದ ಅವರು ಅಜಾತಶತ್ರುವಾಗಿದ್ದರು. ಕೆಂಪೇಗೌಡರು ಬೆಂಗಳೂರು ಕಟ್ಟಿದರು. ಆದರೆ, ಆಧುನಿಕ ಬೆಂಗಳೂರಿನ ನಿರ್ಮಾತೃ ಎಸ್.ಎಂ.ಕೃಷ್ಣ. ಬೆಂಗಳೂರಿಗೆ ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕುವಂತೆ ಮಾಡಿದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು. ಕೃಷ್ಣ ಅವರು ಹೆಜ್ಜೆ ಗುರುತು ಉಳಿಸಲು ವಿಕಾಸಸೌಧ ಕಟ್ಟಿದ್ದರು. ಬರ , ಡಾ. ರಾಜ್‌ಕುಮಾರ್ ಅಪಹರಣ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಆಡಳಿತ ನೀಡಿದರು
. ಆ ಹಿನ್ನೆಲೆಯಲ್ಲಿ ಅವರು ಜನಮಾಸದಲ್ಲಿ ಉಳಿದಿದ್ದಾರೆ ಎಂದರು. ಕೃಷ್ಣ ಅವರು ಎಲ್ಲಿರಿಗೂ ಆದರ್ಶವಾಗಿದ್ದರು. ಅವರು ಕಲೆ ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಇಳಿ ವಯಸ್ಸಿನಲ್ಲಿ ಸಹ ಟೆನ್ನಿಸ್ ಆಡುತ್ತಿದ್ದರು. ಹಿರಿಯ ರಾಜಕಾರಣಿಗಳಲ್ಲಿ ಅವರು ಒಬ್ಬರು ಅವರಂಥವರು ಸಿಗುವುದು ಕಷ್ಟ. ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪೊಟೋ೧೧ಸಿಪಿಟಿ೩: ಚನ್ನಪಟ್ಟಣದಲ್ಲಿ ಎಸ್.ಎಂ. ಕೃಷ್ಣ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಯೋಗೇಶ್ವರ್.