ಸಾರಾಂಶ
ರಾಮನಗರ: ಆಹಾರ ಸಂಸ್ಕರಣಾ ಕಿರು ಉದ್ದಿಮೆಗಳು ಸ್ವ-ಸಹಾಯ ಸಂಘದ ಸದಸ್ಯರ ಬೆಳವಣಿಗೆಗೆ ಹೆಚ್ಚಿನ ಅವಕಾಶ ಹೊಂದಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ಹೇಳಿದರು.
ಬಿಡದಿ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಸಹಾಯ ಪಡೆದಿರುವ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ಥಳೀಯ ತಯಾರಿಕೆ, ಮಾರುಕಟ್ಟೆ ಹಾಗೂ ಸರಬರಾಜು ಸರಪಳಿ ಎಂಬುದು ಕೇವಲ ಒಂದು ಅಗತ್ಯವಲ್ಲ. ಬದಲಿಗೆ ಅದೊಂದು ದೊಡ್ಡ ಜವಾಬ್ದಾರಿಯಾಗಿದೆ. ಹಾಗಾಗಿ ಮಹಿಳೆಯರು ಸ್ವಯಂ ಉದ್ಯೋಗದತ್ತ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೆಪೆಕ್‌ಡಿಆರ್‌ಪಿ ಅಭಿಷೇಕ್ ಮಾತನಾಡಿ, ಸ್ವ-ಸಹಾಯ ಸಂಘದ ಸದಸ್ಯರು ತಾವುಗಳು ತಯಾರಿಸಿದ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆ, ತೂಕ ಇವುಗಳನ್ನು ಕಾಪಾಡಿಕೊಂಡರೆ ನಿಮ್ಮದೇ ಆದ ಬ್ರಾಂಡ್ ಮಾಡಿಕೊಳ್ಳಬಹುದು. ಆಗ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುವ ಜೊತೆಗೆ ನಿಮ್ಮ ವಸ್ತುಗಳು ಹೆಚ್ಚಿನ ರೀತಿಯಲ್ಲಿ ಮಾರಾಟವಾಗುವ ಮೂಲಕ ಬೇಡಿಕೆ ಹೆಚ್ಚಲಿದೆ. ನಿಮ್ಮ ಸಂಘಗಳಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಹ ಸಿಗುತ್ತದೆ. ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಬೆಳೆಯಲು ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಆಹಾರ ಕೈಗಾರಿಕೆಯಲ್ಲಿ ಕಿರು ಉದ್ದಿಮೆಗಳ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳು ತೆರೆದುಕೊಂಡಿವೆ. ಪಿಎಂಎಫ್ಎಂಇ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ದೃಷ್ಟಿಕೋನವನ್ನು ಅನುಸರಿಸುತ್ತಿರುವಂತಹ ಎಫ್‌ಪಿಒಗಳು, ಎಸ್‌ಎಚ್‌ಜಿಗಳು, ಸಹಕಾರ ಸಂಘಗಳು ಅಥವಾ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಎಫ್‌ಪಿವಿಗಳಿಗೆ, ಗುಣಮಟ್ಟ ನಿಯಂತ್ರಣ, ಪ್ರಮಾಣೀಕರಣ ಹಾಗೂ ಗ್ರಾಹಕ ರೀಟೆಲ್ ಮಾರಾಟಕ್ಕಾಗಿ ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಗಳ ಅವಕಾಶಗಳೊಂದಿಗೆ ಸಾಮಾನ್ಯ ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್‌ಗಾಗಿ ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಮಾರುಕಟ್ಟೆ ಹಾಗೂ ಬ್ರ್ಯಾಂಡಿಂಗ್ ಬೆಂಬಲವನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಗೋವಿಂದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜೆ.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ ಕೆ.ಜಿ., ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ವೇತಾ, ಸಹಾಯಕ ನಿರ್ದೇಶಕಿ ಲತಾ, ಅಭಿಯಾನ ವ್ಯವಸ್ಥಾಪಕ ರಾಮಕೃಷ್ಣ ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.ಕೋಟ್ ................
ಬಿಡದಿ ಪಟ್ಟಣದಲ್ಲಿ ಪ್ರತಿ ಭಾನುವಾರ ಸಂತೆ ನಡೆಯಲಿದ್ದು, ಮಹಿಳೆಯರು ಉತ್ಪಾದಿಸಿದ ಆಹಾರ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಅವಕಾಶ ಕಲ್ಪಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಇದರಿಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ.-ಎಂ.ಎನ್.ಹರಿಪ್ರಸಾದ್, ಅಧ್ಯಕ್ಷರು, ಬಿಡದಿ ಪುರಸಭೆ
17ಕೆಆರ್ ಎಂಎನ್ 3.ಜೆಪಿಜಿಬಿಡದಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಸಹಾಯ ಪಡೆದಿರುವ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.