ರೈತರಿಗೆ ಯಾವ ಬ್ಯಾಂಕ್‌ನಲ್ಲಿ ಯಾವ ರೀತಿಯ ಸಾಲ ಸೌಲಭ್ಯ ಲಭ್ಯವಿದೆ, ಸಾಲ ಪಡೆಯಲು ಇರುವ ಅರ್ಹತೆ, ಅಗತ್ಯ ದಾಖಲೆ, ಸಾಲದ ಮಿತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು.

ಧಾರವಾಡ:

ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸುವ ಮೂಲಕ ಪ್ರತಿಯೊಬ್ಬ ಸಣ್ಣ ರೈತನಿಗೂ ಬ್ಯಾಂಕ್ ಸಾಲದ ಪ್ರಯೋಜನ ದೊರೆಯುವಂತೆ ಬ್ಯಾಂಕರ್‌ಗಳು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಪಂ ಸಭಾಂಗಣದಲ್ಲಿ ಧಾರವಾಡ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ರೈತರಿಗೆ ಯಾವ ಬ್ಯಾಂಕ್‌ನಲ್ಲಿ ಯಾವ ರೀತಿಯ ಸಾಲ ಸೌಲಭ್ಯ ಲಭ್ಯವಿದೆ, ಸಾಲ ಪಡೆಯಲು ಇರುವ ಅರ್ಹತೆ, ಅಗತ್ಯ ದಾಖಲೆ, ಸಾಲದ ಮಿತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಈ ಕುರಿತು ಬ್ಯಾಂಕ್‌ಗಳ ನೋಟಿಸ್ ಬೋರ್ಡ್‌ಗಳಲ್ಲಿ ವಿವರಗಳನ್ನು ಸ್ಪಷ್ಟವಾಗಿ ಅಳವಡಿಸಬೇಕು. ಅರ್ಜಿಗಳನ್ನು 15 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರು ಬ್ಯಾಂಕ್‌ಗಳ ಪ್ರಮುಖ ಗ್ರಾಹಕರಾಗಿದ್ದು, ಸಾರ್ವಜನಿಕರ ಸೇವೆಗಾಗಿ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ರೈತರೊಂದಿಗೆ ಬ್ಯಾಂಕ್ ಸಿಬ್ಬಂದಿ ಸೌಜನ್ಯಯುತ ಹಾಗೂ ಗೌರವದಿಂದ ವರ್ತಿಸಬೇಕು. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ್ ಮಾತನಾಡಿ, ರೈತರು ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ಬೆಳೆ ವಿಮೆ ಸೇರಿದಂತೆ ಸಂಬಂಧಿಸಿದ ಸೌಲಭ್ಯಗಳ ಕುರಿತು ಬ್ಯಾಂಕ್‌ಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಬೆಳೆ ವಿಮೆಯ ಪ್ರೀಮಿಯಂ, ನೋಂದಣಿ ಅವಧಿ, ವಿಮಾ ವ್ಯಾಪ್ತಿಗೆ ಒಳಪಡುವ ಬೆಳೆ ಹಾಗೂ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬ್ಯಾಂಕ್ ಸಿಬ್ಬಂದಿ ರೈತರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಬ್ಯಾಂಕ್ ಆಫ್ ಬರೋಡದ ಹರ್ಷಾ ಟಿ.ಜಿ, ಆರ್‌ಬಿಐನ ಅರುಣಕುಮಾರ, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ ಇದ್ದರು.