ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಹಳ್ಳಗಳಿಗೆ ನೀರು ತುಂಬಿಸುವ ಯೋಜನೆ ಸಣ್ಣ ನೀರಾವರಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ತಿಕೋಟಾ ತಾಲೂಕಿನ ಬರಟಗಿ ಗ್ರಾಮದಲ್ಲಿ ತೊರವಿ, ಭೂತನಾಳ, ಇಟ್ಟಂಗಿಹಾಳ, ವಿಠ್ಠಲವಾಡಿ, ಯತ್ನಾಳ, ಅರಕೇರಿ, ಸಿದ್ದಾಪೂರ, ಅರಕೇರಿ, ಜಾಲಗೇರಿ ಹಳ್ಳಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂ ಮತ್ತು ರಿಚಾರ್ಜ್ ಶಾಫ್ಟ್ ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಅಂದಾಜು ₹ 734.63 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಹಾಗೂ 2025-26ನೇ ವರ್ಷದ ಬರಟಗಿ ತಾಂಡಾ-3ರಲ್ಲಿ (ಜಾಧವ ನಗರದಲ್ಲಿ) ₹ 50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕರಾಗಿದ್ದಾಗ ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಿ ನೀರಾವರಿ ಸಚಿವರಾಗಿ ಆ ಯೋಜನೆಯನ್ನು ಸಮರ್ಪಕವಾಗಿ‌ ಜಾರಿ ಮಾಡುವ ಮೂಲಕ ಎಂ.ಬಿ.ಪಾಟೀಲರು ಜಲಕ್ರಾಂತಿ ಮಾಡಿದ್ದಾರೆ. ಈಗ ವ್ಯರ್ಥವಾಗಿ ಹರಿಯುವ ನೀರನ್ನು ಸದ್ಬಳಕೆ ಮಾಡಲು ಹಳ್ಳಗಳನ್ನು ತುಂಬಿಸುವ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಸುಮಾರು 400 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿಸುವ ಮಹತ್ವದ ಯೋಜನೆ ರೂಪಿಸಿದ್ದಾರೆ. ಇಡೀ ದೇಶಕ್ಕೆ ಮಾದರಿಯಾದ ಈ ಯೋಜನೆ ರೂಪಿಸಿರುವ ಸಚಿವರ ಮಾರ್ಗದರ್ಶನದಲ್ಲಿ ನಾನೂ ಕೂಡ ಕೆರೆಗೆ ತುಂಬಿಸುವ ಮತ್ತು ಹಳ್ಳಗಳನ್ನು ತುಂಬಿಸುವ ಕೆಲಸ ಮಾಡಿಸುತ್ತಿದ್ದೇನೆ‌. ನಮ್ಮ ಜಿಲ್ಲೆಯಲ್ಲಿ ನಾವು ಮಾಡದ ಕೆಲಸವನ್ನು ಅವರು ಇಲ್ಲಿ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಅವರು ಹೇಳಿದರು.

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, 176 ಹಳ್ಳಗಳಿಗೆ ಮಳೆಗಾಲದಲ್ಲಿ ಕಾಲುವೆಗಳ ಮೂಲಕ‌ ನೀರು ತುಂಬಿಸಲಾಗುವುದು. ಇದರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಾಗಲಿದೆ. ನಮ್ಮ ವಿಜಯಪುರ ಜಿಲ್ಲೆಯ 27 ಪ್ಯಾಕೇಜ್ ಮೂಲಕ‌ ಯೋಜನೆ ಜಾರಿಗೆ ಸುಮಾರು ₹ 270 ಕೋ. ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡುವ ಮೂಲಕ ಸಚಿವ ಎನ್.ಎಸ್.ಬೋಸರಾಜು ನಮಗೆ ಸಹಾಯ ಮಾಡಿದ್ದು, ಅವರಿಗೆ ಅಭಾರಿಯಾಗಿದ್ದೇನೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.ಮುಖಂಡರಾದ ಬಸನಗೌಡ ಪಾಟೀಲ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ, ಮುಖಂಡರಾದ ಸಿದ್ದನಗೌಡ ಪಾಟೀಲ, ಬಾಳಾಸಾಹೇಬ ಪಾಟೀಲ, ಪೀರಪಟೇಲ ಪಾಟೀಲ, ಪದ್ದು ಚವ್ಹಾಣ, ಡಿ.ಎಲ್.ಚವ್ಹಾಣ, ಗೋವಿಂದ ಶಿಂಧೆ, ಸತೀಶ ನಾಯಕ, ದತ್ತಾ ಕಾಟಕರ, ಧನರಾಜ ಪತ್ತಾರ, ಸುಭಾಸ ರಜಪೂತ, ವಿಜಯಸಿಂಗ ರಜಪೂತ, ಕಾಂತುಗೌಡ ಪಾಟೀಲ ಉಪಸ್ಥಿತರಿದ್ದರು.


ಜಾತಿ ಅನ್ನ ಕೊಡಲ್ಲ, ಕೆಲಸ ಮಾಡುವವರಿಗೆ ಬೆಂಬಲಿಸಿದರೆ ಇನ್ನೂ ಹೆಚ್ಚಿನ‌ ಅಭಿವೃದ್ಧಿ ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಗಟ್ಟಿ‌ಯಾಗಿ ಧ್ವನಿ ಎತ್ತುತ್ತಾರೆ. ಕೈಗಾರಿಕೆ ಸಚಿವರಾದ ಮೇಲೆ ಉತ್ತರ ಕರ್ನಾಟಕಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಅವರಿಗೆ ಶಕ್ತಿ ತಬುವ ಕೆಲಸವನ್ನು ನಾವೆಲ್ಲರೂ ಮಾಡೋಣ.

-ಎನ್.ಎಸ್.ಬೋಸರಾಜು, ಸಚಿವ, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ