ಸಾರಾಂಶ
ಶ್ರೀರಂಗಪಟ್ಟಣದಲ್ಲಿ ಮತ್ತೆ ಭಾರೀ ಸದ್ದು ಕೇಳಿಸಿದ್ದು, ಕೆಲವೆಡೆ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಸೇರಿ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ಭಾರೀ ಸ್ಫೋಟದ ಸದ್ದಿನ ಜತೆಗೆ ಸುಮಾರು 5 ರಿಂದ 10 ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವೂ ಆಗಿದ್ದು, ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.ಸೋಮವಾರ ಮಧ್ಯಾಹ್ನ 3.50ಕ್ಕೆ ಸರಿಯಾಗಿ ಇದ್ದಕ್ಕಿದಂತೆ ನಿಗೂಢ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ವೇಳೆ ಮನೆಯೊಳಗಿನ ಪಾತ್ರೆಗಳು ಅಲುಗಾಡಿವೆ. ಅಂಗಡಿ ಮುಂಗಟ್ಟುಗಳ ಬಳಿ ಭೂಮಿ ಕಂಪಿಸಿದ ಅನುಭವವಾಗಿದೆ.ಕೆಆರ್‌ಎಸ್, ಬೆಳಗೊಳ, ಕೆ.ಶೆಟ್ಟಹಳ್ಳಿ, ಅರಕೆರೆ ಈ ಭಾಗದಲ್ಲಿ ಹೆಚ್ಚಿನ ಶಬ್ದ ಕೇಳಿ ಬಂದಿದೆ.
ಕಳೆದೆರಡು ದಿನಗಳ ಹಿಂದೆ ಮಂಡ್ಯದಲ್ಲಿ ಇಂಥದ್ದೇ ಶಬ್ದ ಕೇಳಿ ಬಂದಿತ್ತು. ಮೇಲಿಂದ ಮೇಲೆ ಕೇಳಿ ಬರುತ್ತಿರುವ ನಿಗೂಢ ಸ್ಫೋಟದ ಶಬ್ದಕ್ಕೆ ಜನ ಆತಂಕಗೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ಬಿಟ್ಟುಕೊಡದ ಕಾರಣ ಜನರ ಆತಂಕ ಹೆಚ್ಚಾಗಿದೆ.