-ಸಾಂಪ್ರದಾಯಿಕ ವಿದ್ಯುತ್‌ ಮೀಟರ್‌ಗೆ ಹೋಲಿಸಿದರೆ ಸ್ಮಾರ್ಟ್‌ ಮೀಟರ್‌ ಹೆಚ್ಚು ಆಧುನಿಕ । ಗುಣಮಟ್ಟದ ಸೇವೆ ಒದಗಿಸುವಲ್ಲಿ ಸ್ಮಾರ್ಟ್‌ ಮೀಟರ್‌ ಪ್ರಮುಖ ಹೆಜ್ಜೆ

------

ಕನ್ನಡಪ್ರಭ ವಾರ್ತೆ ಕಲಬುರಗಿ

ವಿದ್ಯುತ್‌ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರಿಗೆ ಪಾರದರ್ಶಕ, ನಿಖರ ಹಾಗೂ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ ಪ್ರಮುಖ ಹೆಜ್ಜೆಯಾಗಿದೆ.

ಸಾಂಪ್ರದಾಯಿಕ ವಿದ್ಯುತ್‌ ಮೀಟರ್‌ಗಳಿಗೆ ಹೋಲಿಸಿದರೆ ಸ್ಮಾರ್ಟ್‌ ಮೀಟರ್‌ಗಳು ಹೆಚ್ಚು ಆಧುನಿಕವಾಗಿದ್ದು, ವಿದ್ಯುತ್‌ ಬಳಕೆಯ ಮಾಹಿತಿಯನ್ನು ತ್ವರಿತವಾಗಿ ದಾಖಲಿಸಿ ವಿದ್ಯುತ್‌ ಸಂಸ್ಥೆಗೆ ರವಾನಿಸುವ ಸಾಮರ್ಥ್ಯ ಹೊಂದಿವೆ. ಸ್ಮಾರ್ಟ್‌ ಮೀಟರ್‌ ವಿದ್ಯುತ್‌ ಬಳಕೆಯ ಮಾಹಿತಿ ಸ್ವಯಂಚಾಲಿತವಾಗಿ ವಿದ್ಯುತ್‌ ಸಂಸ್ಥೆಗೆ ತಲುಪುತ್ತದೆ. ಇದರಿಂದ ನಿಖರ ಬಿಲ್ಲಿಂಗ್‌, ಪಾರದರ್ಶಕತೆ ಹಾಗೂ ವೇಗವಾದ ಸೇವೆ ಸಾಧ್ಯವಾಗುತ್ತದೆ. ಮೀಟರ್‌ ರೀಡರ್‌ ಮನೆಗೆ ಬರಬೇಕಾದ ಅಗತ್ಯವೂ ಕಡಿಮೆಯಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.


ಪ್ರಸ್ತುತ ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 8,185 ಗ್ರಾಹಕರು ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಇವರಲ್ಲಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕಾಗಿ 3,019 ಗ್ರಾಹಕರು ಸ್ಮಾರ್ಟ್‌ ಮೀಟರ್‌ಗಳನ್ನು ಬಳಸುತ್ತಿದ್ದು, 40 ಗ್ರಾಹಕರು ಪ್ರಿಪೇಡ್‌ ಹಾಗೂ 5,126 ಗ್ರಾಹಕರು ಪೋಸ್ಟ್‌ಪೇಡ್‌ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಂಡಿದ್ದಾರೆ.

ಸ್ಮಾರ್ಟ್‌ ಮೀಟರ್‌ಗಳ ದರ ಸಿಂಗಲ್‌ ಫೇಸ್‌ಗೆ (ಬಾಕ್ಸ್‌ ಸಹಿತ) 4,983 ರೂ., ತ್ರಿಫೇಸ್‌ಗೆ (ಬಾಕ್ಸ್‌ ಸಹಿತ) 8,800 ರೂ. ಹಾಗೂ ತ್ರಿಫೇಸ್‌ ಸಿ.ಟಿ. (CT) ಆಪರೇಟೆಡ್‌ ಸ್ಮಾರ್ಟ್‌ ಮೀಟರ್‌ಗೆ (ಬಾಕ್ಸ್‌ ಸಹಿತ) 27,500 ರೂ. (ಜಿಎಸ್‌ಟಿ ಸೇರಿದಂತೆ) ಎಂದು ನಿಗದಿಯಾಗಿದೆ. ಗ್ರಾಹಕರಿಗೆ ಪ್ರಿಪೇಡ್‌ ಅಥವಾ ಪೋಸ್ಟ್‌ಪೇಡ್‌ ಆಯ್ಕೆಯನ್ನು ನೀಡಲಾಗಿದೆ. ಆದರೆ, ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯವಾಗಿದೆ.

ಸ್ಮಾರ್ಟ್‌ ಮೀಟರ್‌ ಟೆಸ್ಟಿಂಗ್‌ ಲ್ಯಾಬ್‌: ಸ್ಮಾರ್ಟ್‌ ಮೀಟರ್‌ಗಳ ಕಾರ್ಯಕ್ಷಮತೆ, ನಿಖರತೆ ಹಾಗೂ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಜೆಸ್ಕಾಂ ಅತ್ಯಾಧುನಿಕ ಸ್ಮಾರ್ಟ್‌ ಮೀಟರ್‌ ಟೆಸ್ಟಿಂಗ್‌ ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದರಿಂದ ಮೀಟರ್‌ಗೆ ಸಂಬಂಧಿಸಿದ ಗ್ರಾಹಕರ ಅನುಮಾನಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಶೀಘ್ರ ಪರಿಹರಿಸಲು ಸಾಧ್ಯವಾಗುತ್ತದೆ.

ಪ್ರಸ್ತುತ ಕಲಬುರಗಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಟೆಸ್ಟಿಂಗ್‌ ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಮೀಟರ್‌ ಪರೀಕ್ಷೆ ಮಾಡಿಸಿಕೊಳ್ಳಲು ಬಯಸುವ ಗ್ರಾಹಕರು ಸಂಬಂಧಿಸಿದ ಜೆಸ್ಕಾಂ ಉಪವಿಭಾಗದಲ್ಲಿ ಸಿಂಗಲ್‌ ಫೇಸ್‌ ಮೀಟರ್‌ಗೆ 100 ರೂ. ಹಾಗೂ ತ್ರಿಫೇಸ್‌ ಮೀಟರ್‌ಗೆ 200 ರೂ. ಶುಲ್ಕ ಪಾವತಿಸಿ, ತಮ್ಮ ಮೀಟರ್‌ ಅನ್ನು ಟೆಸ್ಟಿಂಗ್‌ ಲ್ಯಾಬ್‌ಗೆ ಕೊಂಡೊಯ್ದು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

....ಕೋಟ್‌....

ಸ್ಮಾರ್ಟ್‌ ಮೀಟರ್‌ಗಳು ವಿದ್ಯುತ್‌ ಕ್ಷೇತ್ರದಲ್ಲಿ ಮಹತ್ವದ ತಾಂತ್ರಿಕ ಪರಿವರ್ತನೆಯಾಗಿವೆ. ಗ್ರಾಹಕರಿಗೆ ನಿಖರ ಬಿಲ್ಲಿಂಗ್‌, ಪಾರದರ್ಶಕ ಸೇವೆ ಹಾಗೂ ಗುಣಮಟ್ಟದ ವಿದ್ಯುತ್‌ ನಿರ್ವಹಣೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ವಿದ್ಯುತ್‌ ಉಳಿತಾಯಕ್ಕೂ ಉತ್ತೇಜನ ದೊರೆಯಲಿದ್ದು, ವಿದ್ಯುತ್‌ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟವನ್ನು ತಗ್ಗಿಸಲು ಸಹಕಾರಿಯಾಗಲಿದೆ. ಸ್ಮಾರ್ಟ್‌ ಮೀಟರ್‌ ಕುರಿತು ಹರಿದಾಡುತ್ತಿರುವ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಜೆಸ್ಕಾಂ ನೀಡುವ ಅಧಿಕೃತ ಮಾಹಿತಿಯನ್ನೇ ನಂಬಬೇಕು.

-ಶಶಿಧರ ಕುರೇರ, ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ, ಕಲಬುರಗಿ