ಕೆಸರ ನಡುವೆಯೇ ಸ್ಮಾರ್ಟ್‌ಸಿಟಿ ಬಸ್‌ ತಂಗುದಾಣ

| Published : Sep 02 2024, 02:01 AM IST

ಸಾರಾಂಶ

ಸ್ಮಾರ್ಟ್‌ಸಿಟಿ ಯೋಜನೆಯನ್ನೇ ಅಣಕಿಸುವ ಅಧ್ವಾನಗಳ ಆಗರವಾಗಿರುವ ಊರುಗಡೂರಿನ ಬಸ್‌ ತಂಗುದಾಣದ ಅವ್ಯವ್ಯಸ್ಥೆಗೆ ಬೇಸತ್ತ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗಸುತ್ತಲು ಕೊಳಚೆ ನೀರು, ಗಿಡಗಂಟಿಗಳು, ಮಳೆ ಬಂದರೆ ನಿಲ್ದಾಣದೊಳಗೆ ಕಾಲಿಡುವುದೇ ಪ್ರಯಾಣಿಕರಿಗೆ ಒಂದು ಸವಾಲು. ಸ್ಮಾರ್ಟ್‌ಸಿಟಿ ಯೋಜನೆಯಿಂದ ಊರುಗಡೂರಿನಲ್ಲಿ ನಿರ್ಮಾಣಗೊಂಡಿರುವ ಬಸ್‌ ನಿಲ್ದಾಣ ಇಡೀ ಸ್ಮಾರ್ಟ್‌ಸಿಟಿ ಯೋಜನೆಯನ್ನೇ ಅಣಕಿಸುತ್ತಿದೆ.

ಸ್ಮಾರ್ಟ್‌ ಆರಂಭದಿಂದಲೂ ಜನರ ಬಹುತೇಕ ದೂರುಗಳು ಸ್ಮಾರ್ಟ್‌ ಸಿಟಿ ಯೋಜನೆಗಳ ಕುರಿತು ಇವೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು ಅಧ್ವಾನ ಆಗಿವೆಯೆಂದು ಕಿಡಿಕಾರುತ್ತಿದ್ದಾರೆ. ಇದಕ್ಕೆ ಊರುಗಡೂರಿನಲ್ಲಿ ನಿರ್ಮಾಣಗೊಂಡಿರುವ ಬಸ್‌ ನಿಲ್ದಾಣವೇ ಸಾಕ್ಷಿ ಎಂಬಂತಾಗಿದೆ.ಊರುಗಡೂರಿನ ಮುಖ್ಯರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಆದರೆ, ಮಳೆಗಾಲದಲ್ಲಿ ನಿಲ್ದಾಣದ ಸುತ್ತ ಕೊಳಚೆ ನೀರು ಬಂದು ನಿಲ್ಲುತ್ತಿದೆ. ಇದರಿಂದ ಗಿಡಗಂಟಿಗಳು ಬೆಳೆದಿದ್ದು, ಜನರು ನಿಲ್ದಾಣದೊಳಗೆ ಒಳಗೆ ಹೊಗಲು ಹಿಂದೇಟು ಹಾಕುವಂತಾಗಿದೆ. ನಿಲ್ದಾಣದ ಮುಂದೆ ಕೆಸರುಮಯವಾಗಿದ್ದು, ಪ್ರಯಾಣಿಕರು ನಿಲ್ದಾಣಕ್ಕೆ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕದಿದ್ದರೆ ಬೀಳುವುದಂತೂ ಖಚಿತ ಎಂಬ ಸ್ಥಿತಿ ಇದೆ. ಹೀಗಾಗಿ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ನೀರು ನಿಲ್ಲದಂತೆ ನಿಲ್ದಾಣದ ಸುತ್ತ ಕಾಂಕ್ರಿಟ್‌ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಬೇರೆಯದ್ದೇ ಕಲ್ಪನೆಯಲ್ಲಿದ್ದ ಜನರಿಗೆ ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳು ಬೇರೆಯದ್ದೇ ಚಿತ್ರಣ ತೋರಿಸುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಸೇರಿದಂತೆ ಮೂಲ ಸೌಕರ್ಯಗಳ ಸೃಷ್ಟಿಗೆ ನಗರದಲ್ಲಿ ಕೈಗೊಂಡಿರುವ ಸಾವಿರಾರು ಕೋಟಿ ರು.ಗಳ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಮತ್ತು ಅವುಗಳ ತಾಂತ್ರಿಕತೆಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬರುತ್ತಿವೆ.ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಜನರಿಗೆ ಖುಷಿ ತರಿಸಿದ್ದರೂ, ಇವುಗಳಲ್ಲಿ ಗುಣಮಟ್ಟ ಮತ್ತು ಉತ್ತಮ ತಾಂತ್ರಿಕತೆ ಇಲ್ಲದಿರುವುದು ಬೇಸರಕ್ಕೆ ಕಾರಣವಾಗಿದೆ. ಆಯಾ ವ್ಯವಸ್ಥೆಯ ಗಮನಕ್ಕೆ ದೂರು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ. ಜನಪ್ರತಿನಿಧಿಗಳು ಇವುಗಳ ಕಡೆಗೆ ಗಮನ ಹರಿಸದ್ದರಿಂದ ಕೆಲಸಗಳು ಹಿಡಿತವಿಲ್ಲದೆ ಸಾಗಿವೆ ಎಂಬುದು ವಿವಿಧ ಸಂಘಟನೆಗಳ ಮುಖಂಡರ ಆರೋಪವಾಗಿದೆ.