ಸಾರಾಂಶ
ಸಂಡೂರು: ಭಾರತ ಸರ್ಕಾರದ ಗಣಿ ಸಚಿವಾಲಯ ನೀಡುವ ೨೦೨೨-೨೩ರ ಪ್ರತಿಷ್ಠಿತ ೫ ಸ್ಟಾರ್ ರೇಟಿಂಗ್ ಪ್ರಶಸ್ತಿಗೆ ಸಂಡೂರು ಮ್ಯಾಂಗನೀಸ್ ಮತ್ತು ಐರನ್ಸ್ ಲಿಮಿಟೆಡ್‌ನ (ಸ್ಮಯೋರ್) ಸಂಸ್ಥೆ ಭಾಜನವಾಗಿದೆ.ಆ.೭ರಂದು ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐಬಿಎಂ) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ ಮತ್ತು ಹಾಗೂ ಕಲ್ಲಿದ್ದಲು ಮತ್ತು ಗಣಿಗಳ ರಾಜ್ಯ ಸಚಿವ ಸತೀಶ್ ದುಬೆ ೫ ಸ್ಟಾರ್ ರೇಟಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ಸ್ಮಯೋರ್ ಗಣಿ ಸಂಸ್ಥೆಯ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಹಮ್ಮದ್ ಅಬ್ದುಲ್ ಸಲೀಮ್ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್ ಪ್ರಭು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.೨೦೧೪-೧೫ ಸಾಲಿನಿಂದ ಭಾರತ ಸರ್ಕಾರದ ಗಣಿ ಸಚಿವಾಲಯವು ಉತ್ತಮವಾಗಿ ಕಾರ್ಯ ನಿರ್ವಹಿಸುವ ಗಣಿ ಸಂಸ್ಥೆಗಳಿಗೆ ಈ ಪ್ರತಿಷ್ಠಿತ ೫ ಸ್ಟಾರ್ ರೇಟಿಂಗ್ ಪ್ರಶಸ್ತಿ ನೀಡುತ್ತಿದೆ. ಸ್ಮಯೋರ್ ಸಂಸ್ಥೆಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿ ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಸ್ಮಯೋರ್ ಸಂಸ್ಥೆಗೆ ಕೇಂದ್ರ ಸರಕಾರವು ಈ ೫ ಸ್ಟಾರ್ ರೇಟಿಂಗ್ ಅವಾರ್ಡ್ ನೀಡಿದೆ.
ಇಡೀ ದೇಶದಲ್ಲಿ ೨೦೨೨-೨೩ರ ಆರ್ಥಿಕ ವರ್ಷಕ್ಕೆ ದೇಶದಾದ್ಯಂತ ೧೨೫೬ ಮೈನಿಂಗ್ ಲೀಜ್‌ಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಅದರಲ್ಲಿ ೬೮ ಮೈನಿಂಗ್ ಲೀಜ್‌ಗಳು ಈ ಪ್ರತಿಷ್ಠಿತ ೫ ಸ್ಟಾರ್ ರೇಟಿಂಗ್ ಪ್ರಶಸ್ತಿ ಪಡೆದುಕೊಂಡಿವೆ. ಇದರಲ್ಲಿ ಸಂಡೂರಿನ ಸ್ಮಯೋರ್ ಸಂಸ್ಥೆಯ ಮೈನಿಂಗ್ ಲೀಜ್ ಕೂಡ ಒಂದು ಎನ್ನುವುದು ವಿಶೇಷ.