ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹೊಣೆಗಾರಿಕೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ.
ಹುಬ್ಬಳ್ಳಿ:
ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ನಡೆಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಭಾರತದ ಅಭಿವೃದ್ಧಿಯ ವೇಗ ತಡೆಯಲು ವಿದೇಶಿ ಶಕ್ತಿಗಳು ಸಂಚು ರೂಪಿಸುತ್ತಿವೆ ಎಂದು ವಿಪ ಸದಸ್ಯ ಸಿ.ಟಿ. ರವಿ ಆರೋಪಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹೊಣೆಗಾರಿಕೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಎಸ್ಐಆರ್ ಪ್ರಕ್ರಿಯೆ ಹಾಗೂ ಇವಿಎಂಗಳ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಗೆದ್ದಾಗ ಇವಿಎಂ ಸರಿಯಿದೆ, ಸೋತಾಗ ದೋಷವಿದೆ ಎನ್ನುವವರು ಇವಿಎಂ ಮೂಲಕ ಗೆದ್ದಿರುವ ಸ್ಥಾನಗಳಿಗೆ ರಾಜೀನಾಮೆ ನೀಡಿ, ಬಳಿಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಅವರ ರಾಜೀನಾಮೆ ಕೇಳಲಿ ಎಂದರು.
ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದ ಹೆಚ್ಚಿನ ಮಾಹಿತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಳಿಯೇ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ವಿಡಿಯೋ ಬಿಡುಗಡೆ ಮಾಡಿರುವುದು ಕಾಂಗ್ರೆಸ್ನ ಆಂತರಿಕ ರಾಜಕಾರಣದ ಭಾಗವಾಗಿರಬಹುದು. ಆಡಳಿತ ಪಕ್ಷದವರೇ ಅವರನ್ನು ಬಗ್ಗಿಸಲು ಈ ತಂತ್ರ ರೂಪಿಸಿದ್ದಾರೆ ಎಂಬ ಅನುಮಾನವಿದೆ ಎಂದು ದೂರಿದರು. ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಂಧಿಸುವ ಬದಲು ವಿಡಿಯೋ ಪೋಸ್ಟ್ ಮಾಡಿದವರನ್ನು ಬಂಧಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಮಾಡಿದವರನ್ನು ಪತ್ತೆಹಚ್ಚಲಿ. ಪ್ರಕರಣದ ಸೂತ್ರಧಾರಿಗಳು, ಪಾತ್ರಧಾರಿಗಳು ಕಾಂಗ್ರೆಸ್ನವರೇ ಎಂದು ಆರೋಪಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದರು.ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಸ್ಟಿಂಗ್ ಆಪರೇಷನ್, ಜಿಲೇಬಿ, ಜಾಮೂನು ವಿಚಾರಗಳೇ ಚರ್ಚೆಯಾಗುತ್ತಿವೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಅವರಿಗೆ "ಪ್ರಾಮಾಣಿಕರಾಗಿರಿ " ಎಂದು ಹೇಳಿಲ್ಲ, "ಹುಷಾರಾಗಿರಿ " ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿದ್ದು, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಮಾತ್ರ ನಿರಂತರವಾಗಿ ಜಾರಿಯಲ್ಲಿವೆ ಎಂದು ಟೀಕಿಸಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಜನನ-ಮರಣ ಪ್ರಮಾಣಪತ್ರ, ಆರ್ಟಿಸಿ, ಸ್ಟಾಂಪ್ ಪೇಪರ್, ವಿದ್ಯುತ್ ಬಿಲ್ ಹಾಗೂ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರ ಹೊರೆ ಹೆಚ್ಚಾಗಿದೆ ಎಂದು ಆರೋಪಿಸಿದರು.ಕಬ್ಬು ಬೆಳೆಗಾರರ ಹೋರಾಟದ ಕುರಿತು ಪ್ರತಿಕ್ರಿಯಿಸಿ, ರೈತರ ಹಿತ ಕಾಪಾಡುವ ಜತೆಗೆ ಗ್ರಾಹಕರಿಗೂ ಹೆಚ್ಚಿನ ಹೊರೆ ಆಗದಂತೆ ನೋಡಿಕೊಳ್ಳಬೇಕು. ರೈತರ ಬೇಡಿಕೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಲಿದೆ ಎಂದರು.
ವಿಧಾನ ಪರಿಷಯ್ನ ನಾಲ್ಕು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತದಾರರು ತಮ್ಮ ರಾಜಕೀಯ ನಿಲುವು ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾಂತೇಶ ಕವಟಗಿಮಠ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.