ಸಾರಾಂಶ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವರ ಮಾರ್ಗದರ್ಶನ ಹಾಗೂ ಸಾಧನೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದ್ದು, ಎಲ್ಲಾ ಪಕ್ಷದವರನ್ನು ಸೇರಿಸಿ ಕೃಷ್ಣ ಅವರ ಕುರಿತು ಚರ್ಚಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವರ ಮಾರ್ಗದರ್ಶನ ಹಾಗೂ ಸಾಧನೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದ್ದು, ಎಲ್ಲಾ ಪಕ್ಷದವರನ್ನು ಸೇರಿಸಿ ಕೃಷ್ಣ ಅವರ ಕುರಿತು ಚರ್ಚಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಮಂಗಳವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಕೃಷ್ಣ ಅವರ ಜತೆಗೆ ತಮ್ಮ ರಾಜಕೀಯ ಒಡನಾಟಗಳನ್ನು ಮೆಲುಕು ಹಾಕಿದರು.
ನನ್ನ ರಾಜಕಾರಣದ ಬದುಕಿನಲ್ಲಿ ಕೃಷ್ಣ ಅವರು ತಂದೆಯಂತೆ ಮಾರ್ಗದರ್ಶನ ನೀಡಿದ್ದಾರೆ. ನನ್ನನ್ನು ಪೋಷಿಸಿ ಇಲ್ಲಿವರೆಗೂ ತಂದು ನಿಲ್ಲಿಸಿದ್ದಾರೆ. ಎಸ್.ಎಂ.ಕೃಷ್ಣ ವೈಯಕ್ತಿಕ ಕಾರಣಕ್ಕೆ ಬಿಜೆಪಿ ಸೇರಿದ್ದರು. ಅವರನ್ನು ಕಾಂಗ್ರೆಸ್‌ಗೆ ಮರಳಿ ಕರೆತರುವ ಪ್ರಯತ್ನ ಆಗಿತ್ತು. ಖರ್ಗೆಯವರ ಜೊತೆಗೂ ಚರ್ಚೆ ನಡೆದಿತ್ತು. ನೀವು ಕಾಂಗ್ರೆಸ್‌ಮ್ಯಾನ್ ಆಗಿಯೇ ಸಾಯುವಂತೆ ಮನವಿ ಮಾಡಿದ್ದೆ ಎಂದು ನೆನಪಿಸಿಕೊಂಡರು.ಅವರ ಶರೀರ ಮಾತ್ರ ನಮ್ಮ ಜೊತೆಗಿಲ್ಲ. ಅವರ ಮಾರ್ಗದರ್ಶನ ಹಾಗೂ ಅವರು ಬಿಟ್ಟು ಹೋಗಿರುವ ಸಾಕ್ಷಿ ಗುಡ್ಡೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದೆ. ಕೃಷ್ಣ ಅವರು ಕಟ್ಟಿದ ವಿಕಾಸ ಸೌಧ, ಉದ್ಯೋಗ ಸೌಧ, ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯಾಗಿ ರೂಪಿಸಿದ ರೀತಿ ನಮಗೆ ದಾರಿದೀಪ. ಎಲ್ಲಾ ಪಕ್ಷದವರನ್ನು ಸೇರಿಸಿ ಕೃಷ್ಣ ಅವರ ಕುರಿತು ಚರ್ಚೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಮಾಜಿ ಶಾಸಕ ಜಯಣ್ಣ ಕೂಡ ವಿಧಿವಶರಾಗಿದ್ದಾರೆ. ಇದರಿಂದಲೂ ಪಕ್ಷಕ್ಕೆ ನಷ್ಟವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ಮುಖಂಡರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ವಿ.ಎಸ್.ಉಗ್ರಪ್ಪ ಮತ್ತಿತರರಿದ್ದರು.