ಭದ್ರಾ ಮೇಲ್ದಂಡೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದ ಎಸ್‌ಎಂಕೆ

| Published : Dec 11 2024, 12:46 AM IST

ಭದ್ರಾ ಮೇಲ್ದಂಡೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದ ಎಸ್‌ಎಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ 23-08-2003 ರಲ್ಲಿ 2813 ಕೋಟಿ ರು ಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದಸರ್ಕಾರಿ ಆದೇಶದ ಪ್ರತಿ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಮೊದಲ ಬಾರಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಕೈಂಕರ್ಯ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲು ಎಸ್.ಎಂ.ಕೃಷ್ಣ ಚಿತ್ರದುರ್ಗಕ್ಕೆ ಬಂದಾಗ ಅವರ ಬಳಿ ನಿಜಲಿಂಗಪ್ಪ ನೀರಾವರಿ ಯೋಜನೆ ವಿಷಯ ಪ್ರಸ್ತಾಪಿಸಿದ್ದರು.

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಅಪ್ಪರ್ ಭದ್ರಾ ಜಾರಿ ಮಾಡಬೇಕಿತ್ತು.ಆವಾಗ ತಜ್ಞರು ವರದಿ ನೀಡಿರಲಿಲ್ಲ. ಈಗ ಯಾವುದೋ ವರದಿ ಇದೆಯಂತೆ ಅದಕ್ಕೆ ಒಪ್ಪಿಗೆ ನೀಡಿ ನೀರಾವರಿ ಜಾರಿಗೊಳಿಸಿ ಎಂದು ನಿಜಲಿಂಗಪ್ಪ ವಿನಂತಿಸಿದ್ದರು. ಆ ವೇಳೆ ರೆಡಿ ಇದ್ದ 2813 ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ(23-08-2003 ರಲ್ಲಿ ) ಆಡಳಿತಾತ್ಮಕ ಒಪ್ಪಿಗೆ ನೀಡಿದ್ದ ಎಸ್.ಎಂ.ಕೃಷ್ಣ ಯೋಜನೆ ಜಾರಿಗೆ ನೀರಾವರಿ ನಿಗಮಕ್ಕೆ ಒಪ್ಪಿಸಿದ್ದರು. 2813 ಕೋಟಿ ರು ವೆಚ್ಚದ ಭದ್ರಾ ಮೇಲ್ದಂಡೆ 21 ವರ್ಷಗಳಷ್ಟು ಸುದೀರ್ಘ ಹಾದಿ ಸವೆಸಿ 23 ಸಾವಿರ ಕೋಟಿರು ಗೆ ಬಂದು ನಿಂತಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

*ನಿಜಲಿಂಗಪ್ಪ ಅವರ ಕಡೇ ಆಸೆ ಈಡೇರಿಸಿದ್ದ ಎಸ್.ಎಂ.ಕೃಷ್ಣ

ಚಿತ್ರದುರ್ಗದ ನಿವಾಸದಲ್ಲಿ ಕಾಲು ಜಾರಿ ಬಿದ್ದು ಬೆಂಗಳೂರು ಬೋರಿಂಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ತಾವು ವಕೀಲರಾಗಿದ್ದಾಗ ಕಟ್ಟಿಸಿದ್ದ ಚಿತ್ರದುರ್ಗದ ನಿವಾಸದಲ್ಲಿಯೇ ಕೊನೆಯುಸಿರು ಬಿಡುವುದಾಗಿ ಪಟ್ಟ ಹಿಡಿದ್ದರು. ಈ ಸಂಗತಿಯ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಲ್ಲಿ ಎಸ್ಸೆನ್ ಕುಟುಂಬ ನಿವೇದಿಸಿಕೊಂಡಿತ್ತು. ಎಸ್ಸೆನ್ ಕೋರಿಕೆಯ ಗಂಭೀರವಾಗಿ ಪರಗಣಿಸಿದ ಎಸ್.ಎಂ.ಕೃಷ್ಣ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿಯೇ ನಿಜಲಿಂಗಪ್ಪ ಅವರನ್ನು ಚಿತ್ರದುರ್ಗನಿವಾಸಕ್ಕೆ ಕಳಿಸಿಕೊಟ್ಟಿದ್ದರು. ಸಾಲದೆಂಬಂತೆ ಅವರ ಆರೋಗ್ಯ ವಿಚಾರಣೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯರ ನಿಯೋಜಿಸಿದ್ದರು. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದ ನಿಜಲಿಂಗಪ್ಪ ಬಹಳ ದಿನ ಬದುಕಲಿಲ್ಲ. ಎಸ್ಸೆನ್ ಅಂತ್ಯ ಸಂಸ್ಕಾರಕ್ಕೆ ಜೊತೆ ಆಗಮಿಸಿದ್ದ ಎಸ್ಸೆಂ ಕೃಷ್ಣ ಖದ್ದು ಆಸಕ್ತಿ ವಹಿಸಿ ಎಲ್ಲ ವಿಧಿ ವಿಧಾನಗಳ ಪೂರೈಸಿದ್ದರು. ಅಚ್ಚರಿ ಎಂದರೆ ನಿಜಲಿಂಗಪ್ಪ ಅವರ 123 ನೇ ಜನ್ಮದಿನದಂದು ಎಸ್ಸೆಂ ಕೃಷ್ಣ ಕೊನೆಯುಸಿರೆಳೆದಿದ್ದಾರೆ.

ಎಸ್‌.ಎಂ.ಕೃಷ್ಣಗೆ ಮದುವೆ ಮಾಡಿಸಿದ್ದ ಎಸ್‌.ನಿಜಲಿಂಗಪ್ಪ

ಮಾಜಿ ಮುಖ್ಯಮಂತ್ರಿ ಎಸ್ .ನಿಜಲಿಂಗಪ್ಪ ಹಾಗೂ ಎಸ್ಸೆಂ ಕೃಷ್ಣ ಅವರಿಗೂ ವಿಶೇಷ ನಂಟು. ಕೃಷ್ಣ ಅವರ ಪತ್ನಿ ಪ್ರೇಮಾ ಅವರ ತಂದೆ ನಿಜಲಿಂಗಪ್ಪ ಅವರ ಅನುಯಾಯಿಗಳು. ಹಾಗಾಗಿ ಪ್ರೇಮಾ ಅವರನ್ನುಮದುವೆಯಾಗುವಂತೆ ಎಸ್ಸೆನ್ ಹೇಳಿದ್ದರು. ಎಸ್ಸೆನ್ ಮನವಿ ಪುರಸ್ಕರಿಸಿ ಪ್ರೇಮಾ ಅವರನ್ನು ಕೃಷ್ಣ ವರಿಸಿದ್ದರು.

ಆ ಕಾಲದಲ್ಲಿ ಕಾರು ಉತ್ಪಾದನೆ ಪ್ರಮಾಣ ಕಡಿಮೆ ಇತ್ತು. ಫಿಯಟ್ ಕಾರು ಕೊಳ್ಳಬೇಕಾದರೆ ಮುಖ್ಯಮಂತ್ರಿಗಳು ಅಲಾಟ್‌ಮೆಂಟ್‌ ಪತ್ರ ನೀಡುತ್ತಿದ್ದರು. ಎಸ್.ಎಂ.ಕೃಷ್ಣ ಮದುವೆಯಾದ ನಂತರ ಕಾರು ಕೊಳ್ಳಿವಂತೆ ಹೇಳಿ ಫಿಯಟ್ ಕಂಪನಿಗೆ ನಿಜಲಿಂಗಪ್ಪ ಶಿಪಾರಸು ಪತ್ರ ನೀಡಿದ್ದರಂತೆ. ಇದನ್ನು ಚಿತ್ರದುರ್ಗದ ಕಾರ್ಯಕ್ರಮಮವೊಂದರಲ್ಲಿ ಸ್ವತಃ ಎಸ್.ಎಂ.ಕೃಷ್ಣ ಹೇಳಿಕೊಂಡಿದ್ದರು.