ತಂಬಾಕು ಸೇವನೆ ಜೀವಕ್ಕೆ ಮಾರಕ

| Published : Jun 01 2024, 12:46 AM IST

ಸಾರಾಂಶ

ಮಕ್ಕಳನ್ನು ತಂಬಾಕು ಸೇವನೆ ಒಳಗಾಗದಂತೆ ಸಮುದಾಯದ ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸಿದಲ್ಲಿ ಭವಿಷ್ಯದ ಪೀಳಿಗೆ ತಂಬಾಕಿನ ಅಪಾಯಗಳಿಂದ ರಕ್ಷಿಸಬಹುದು

ರೋಣ: ತಂಬಾಕು ಸೇವನೆ ಹಲವಾರು ರೋಗಕ್ಕೆ ಕಾರಣವಾಗಿರುವುದರಿಂದ ಜೀವಕ್ಕೆ ಮಾರಕವಾಗಲಿದೆ. ತಂಬಾಕು ಸೇವನೆಯಿಂದ ರೋಗ ಪಡೆಯುವದಕ್ಕಿಂತ ಆರೋಗ್ಯಕರ ಜೀವನ ಆಯ್ದುಕೊಳ್ಳುವುದು ಯೋಗ್ಯ ಎಂದು ಡಾ. ಭೀಮಸೇನ ಜೋಶಿ ಸಾರ್ವಜನಿಕ ತಾಲೂಕಾಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಶಕೀಲ ಅಹ್ಮದ ದುಂದರಗಿ ಹೇಳಿದರು.

ಅವರು ಶುಕ್ರವಾರ ರೋಣ ಪಟ್ಟಣದ ತಾಲೂಕ ಮಟ್ಟದ ಆಸ್ಪತ್ರೆ ಸಭಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಗದಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ,ಪುರಸಭೆ ಕಾರ್ಯಾಲಯ,ಆರಕ್ಷಕ ಇಲಾಖೆ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ರೋಣ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ತಿನ್ನುವುದರಿಂದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ,ಶ್ವಾಸಕೋಶ ಸಂಬಂಧಿಸಿದ ಕಾಯಿಲೆ,ತೂಕದ ಮಕ್ಕಳ ಜನನ ಸೇರಿದಂತೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ತಂಬಾಕು ಸೇವೆಯಿಂದ ಮುಕ್ತರಾಗಬೇಕು. ಇಒ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಮುದಾಯದಲ್ಲಿ ತಂಬಾಕದ ಅಪಾಯಗಳ ಬಗ್ಗೆ ತಿಳಿಸಿಕೊಟ್ಟು ತಂಬಾಕು ಸೇವನೆ ಗಣನೀಯವಾಗಿ ಕಡಿತಗೊಳಿಸಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಆರ್.ಎನ್. ಹುರಳಿ ಮಾತನಾಡಿ, ಮಕ್ಕಳನ್ನು ತಂಬಾಕು ಸೇವನೆ ಒಳಗಾಗದಂತೆ ಸಮುದಾಯದ ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸಿದಲ್ಲಿ ಭವಿಷ್ಯದ ಪೀಳಿಗೆ ತಂಬಾಕಿನ ಅಪಾಯಗಳಿಂದ ರಕ್ಷಿಸಬಹುದು. ಮಕ್ಕಳು ಮತ್ತು ಹರಿದವರಲ್ಲಿ ಬೇರೆ ಬೇರೆ ಪ್ರಭಾವಕ್ಕೊಳಗಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದಲ್ಲಿ ಮಕ್ಕಳನ್ನು ಗುರುತಿಸಿ ತಂಬಾಕಿನ ಅಪಾಯಕ್ಕೆ ಒಳಗಾಗದಂತೆ ಕಣ್ಗಾವಲು ಮಾಡುವುದರ ಬಗ್ಗೆ ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ತಂಬಾಕಿನಿಂದ ಪ್ರತಿ ವರ್ಷ ಜಗತ್ತಿನಾದ್ಯಂತ 80 ಲಕ್ಷ ಸಾವು ಸಂಭವಿಸುತ್ತವೆ. ಆ ಎಲ್ಲ ಸಾವುಗಳು ತಡೆಗಟ್ಟಬಹುದಾದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ತಂಬಾಕಿನ ಅಪಾಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಸಂಭವಿಸಬಹುದಾದ ಸಾವುಗಳನ್ನು ತಡೆಗಟ್ಟುವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಸಿಯೂಟ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎ. ಫಣಿಬಂದ, ವಿಜಯಲಕ್ಷ್ಮಿ ಹಿರೇಮಠ, ವಕೀಲ ಎಂ.ಎಚ್. ಮುಲ್ಲಾ, ಡಾ.ಮಹೇಶ ಹೊಸಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಆರ್. ಪಾಟೀಲ, ಪ್ರಭಾರಿ ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ರೈಹೀಮಾ ಅತ್ತಾರ, ತಾಲೂಕು ಆಶಾ ಮೆಂಟರ್‌ ರತ್ನ ಬನ್ನಪ್ಪನವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎಸ್. ಎಚ್.ಬಿಳೆಕಲ್ಲ ನಿರೂಪಿಸಿ ವಂದಿಸಿದರು.