ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ಸುಗಮ ಸಂಗೀತ 20 ನೇ ಶತಮಾನದಲ್ಲಿ ಆರಂಭಗೊಂಡರು ಇಂದು ವಿಶ್ವವ್ಯಾಪಿಯಾಗಿ ಯುವ ವರ್ಗದಿಂದ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮುದ ನೀಡುವ ಸಂಗೀತ ಪ್ರಕಾರವಾಗಿದೆ. ಸುಗಮ ಸಂಗೀತವನ್ನು ಉಳಿಸಿ ಬೆಳಸಬೇಕು ಎಂದು ನಿವೃತ್ತ ವ್ಯದ್ಯಾಧಿಕಾರಿ ಮತ್ತು ಖ್ಯಾತ ಗಝಲ್ ಕವಿಗಳಾದ ಡಾ. ಶ್ರೀ ಶೈಲ ಮಾದಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಣವ ಸಂಗೀತ ಶಾಲೆ ಬೆಂಗಳೂರು ಇವರ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ಸಮಾರಂಭ ವಿರಾಜಪೇಟೆ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಶ್ರೀಶೈಲ ಅವರು ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗದೆ ನಾಡಿನ ದಿವ್ಯ ಪರಂಪರೆಯ ಸಂಸ್ಕೃತಿಗಳ ಭಾಗವಾದ ಕರ್ನಾಟಕ ಸಂಗೀತ, ಜನಪದ, ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿ ಮುಂದಿನ ತಲೆಮಾರಿಗೂ ಮುಂದುವರೆಸುವ ಅನಿವಾರ್ಯ ಸಮಾಜಕ್ಕಿದೆ. ಯುವ ಜನತೆ ಸೇರಿದಂತೆ ಮುಪ್ಪಿನಲ್ಲಿರುವ ವ್ಯಕ್ತಿಗಳಿಗೂ ಮನಸ್ಸಿಗೆ ಮುದ ನೀಡುವ ಸಂಗೀತ ಸುಗಮ ಸಂಗೀತವಾಗಿದ್ದು, ಜನಪದ ಸಾಹಿತ್ಯಕ್ಕೆ ಹೊಸ ಲೇಪನ ಮಾಡಿ, ಹಾಡಿನ ಮೂಲಕ ಮೋಡಿ ಮಾಡುವ ಶಕ್ತಿ ಸುಗಮ ಸಂಗೀತಕ್ಕಿದೆ. ಈ ನಿಟ್ಟಿನಲ್ಲಿ ಪಣವ ಸಂಗೀತ ಶಾಲೆಯ ಪರಿಶ್ರಮ ಅನನ್ಯವಾದುದು ಎಂದು ಹೇಳಿದರು.ಪ್ರಾಸ್ತಾವಿಕ ಭಾಷಣ ಮಾಡಿದ ಪ್ರಣವ ಸಂಗೀತ ಶಾಲೆಯ ಮುಖ್ಯ ಶಿಕ್ಷಕಿ ಡಾ. ಕಾವ್ಯಾ ಕಾಮತ್ ಕೆ.ಎ. ಸುಮಾರು ಎಳು ವರ್ಷಗಳ ಹಿಂದೆ ವಿರಾಜಪೇಟೆ ನಗರದ ಎಫ್. ಎಂ.ಸಿ.ರಸ್ತೆಯ ಗಾಯತ್ರಿ ಭವನ ಕಟ್ಟಡದಲ್ಲಿ ಆರಂಭವಾಯಿತು. ನಂತರದಲ್ಲಿ ಬೆಂಗಳೂರು ನಲ್ಲಿ ಶಾಲೆಯನ್ನು ಆರಂಭಿಸಲಾಯಿತು. ಸುಗಮ ಸಂಗೀತ, ಕರ್ನಾಟಕ ಸಂಗೀತವನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಬಾಲಕ ಬಾಲಕಿಯರು ಹಾಗೂ ಯುವ ವರ್ಗ ಸೇರಿದಂತೆ 60 ರ ಹದಿಹರೆಯದ ವ್ಯಕ್ತಿಗಳು ಇಂದು ಪ್ರಣವ ಸಂಗೀತ ಶಾಲೆಯ ಭಾಗವಾಗಿದ್ದಾರೆ. ರಾಜ್ಯ ಅಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಹಲವಾರು ಮಂದಿ ಆನ್ ಲೈನ್ ಮೂಲಕ ಸುಗಮ ಸಂಗೀತವನ್ನು ಕಲಿಯುತ್ತಿದ್ದಾರೆ. ಸಂಗೀತ ಶಾಲೆ ಪ್ರಥಮ ಕಾರ್ಯಕ್ರಮವನ್ನು ಇಂದು ಆಚರಿಸಲಾಗುತ್ತಿದೆ. ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸುಗಮ ಸಂಗೀತ ಗಾಯಕರು ಮತ್ತು ಕೆಂಪೇಗೌಡ ಪ್ರಶಸ್ತಿ ವಿಜೇತರಾದ ಕೆ.ಎಸ್. ಶ್ರೀಧರ್ ಅಯ್ಯರ್ ಅವರು ಸುಗಮ ಸಂಗೀತ ಕ್ಕೆ ಹೊಸ ಅಧ್ಯಾಯ ಬರೆದರು. ದಿ. ಸಿ.ಎಸ್. ಆಶ್ವತ್ ಅವರು ಗಾಯನ ಶೈಲಿ ಮತ್ತು ಪದಗಳ ಉಚ್ಚಾರಣಾ ಶೈಲಿಯ ಮೂಲಕ ವಿಶ್ವ ಮನಸ್ಸು ಗೆದ್ದ ಮಹಾನ್ ಗಾಯಕ. ಸುಗಮ ಸಂಗೀತ ಎಂದರೆ ಪದಗಳ ಜೋಡಣೆಯೊಂದಿಗೆ ಸುಲಲಿತವಾಗಿ ಹಾಡುವ ಶೈಲಿ. ದಾಸ ಪದಗಳು, ಜಾನಪದ, ಪದಗಳಿಗೆ ಜೀವತುಂಬಿ ಹೃದಯ ಭಾಷೆಯ ಮೂಲಕ ಭಿನ್ನವಾಗಿ ಹಾಡುವ ಚತುರತೆಯಿಂದ ಹಲವು ಖ್ಯಾತನಾಮರು ತಮ್ಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಸಾಧನೆಯೆ ಮುಖ್ಯ. ಬಾಲ್ಯದಿಂದಲೇ ಸಂಗೀತ ವನ್ನು ಕರಗತ ಮಾಡಿಕೊಂಡಲ್ಲಿ ಸಾಧನೆ ಹಂತ ತಲುಪಲು ಸಹಾಯವಾಗುತ್ತದೆ ಎಂದು ಹೇಳಿದರು.ಸಂಗೀತ ನಿರ್ದೇಶಕ, ಸುಗಮ ಸಂಗೀತ ಗಾಯಕ ಮೃತ್ಯುಂಜಯ ದೊಡ್ಡವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸುಗಮ ಸಂಗೀತ ತನ್ನದೇಯಾದ ರೀತಿಯಲ್ಲಿ ವಿಶ್ವವ್ಯಾಪಕವಾಗಿದೆ. ಜನಮನ್ನಣೆಯನ್ನು ಪಡೆದಿದೆ. ಜಾನಪದ ಸಾಹಿತ್ಯದ ಸೊಗಡಿನೊಂದಿಗೆ ಯುವ ಸಮುದಾಯ ಮತ್ತು ವೃದ್ದರಿಗೂ ಮನಕ್ಕೆ ಹಿತ ನೀಡುವಂತೆ ಸುಗಮ ಸಂಗೀತ ಖ್ಯಾತಿ ಪಸರಿಸಿದೆ. ಸುಗಮ ಸಂಗೀತ ಕಲಿಕೆಯ ಆಸಕ್ತಿ ಹೆಚ್ಚಬೇಕು. ಉಳಿಯಬೇಕು ಮತ್ತು ಬೆಳಸಬೇಕು. ಧೀಮಂತ ಭಾರತೀಯ ಸಂಸ್ಕೃತಿಯ ಕಲೆ ಸಾಹಿತ್ಯ ಪರಂಪರೆಯು ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಣವ ಸಂಗೀತ ಶಾಲೆಯ ಕೀರ್ತಿ ರಾಜ್ಯ ದೇಶ ವಿದೇಶಗಳಲ್ಲಿ ಪಸರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ಕ್ಲಿಫರ್ಡ್ ಡಿಮೆಲ್ಲೊ ಅವರ ಕುಂಚ ಗಾಯನದ ಮೂಲಕ ಶಿವನ ಕಲಾಚಿತ್ರ ಅನಾವರಣವಾಯಿತು.ಪ್ರಣವ ಸಂಗೀತ ಶಾಲೆಯ ಸಮಿತಿ ಸದಸ್ಯರು, ಸಂಗೀತ ಪರಿಕರಗಳನ್ನು ನುಡಿಸುವ ಕಲಾವಿದರು, ವಿರಾಜಪೇಟೆ ನಗರ ಸೇರಿದಂತೆ ರಾಜ್ಯದ ವಿವಿದಡೆಗಳಿಂದ ಆಗಮಿಸಿದ ಬಾಲ ಪ್ರತಿಭೆಗಳು, ಪೋಷಕರು ಹಾಜರಿದ್ದರು.