ಸಾರಾಂಶ
ಆನೆಗುಂದಿ ಉತ್ಸವ ಸ್ಥಳದಲ್ಲಿ ಬಸ್, ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ. ಕ್ರೂಸರ್, ಕಾರ್, ದ್ವಿಚಕ್ರ ವಾಹನಗಳ ಮೂಲಕ ಬಂದ ಹನುಮ ಮಾಲಾಧಾರಿಗಳು, ಭಕ್ತರಿಗೆ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ನಿಗದಿಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬಹುದು. ಪಾರ್ಕಿಂಗ್ ಸ್ಥಳದಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಡಿ.22ರಿಂದ 24ರವರೆಗೆ ನಡೆಯುವ ಹನುಮಮಾಲಾ ವಿಸರ್ಜನೆಗೆ ಬರುವ ಭಕ್ತರಿಗೆ ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆ ಬಗ್ಗೆ ಪೊಲೀಸ್ ಇಲಾಖೆ ನಕಾಶೆ ಸಿದ್ಧಪಡಿಸಿದೆ.
ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಹನುಮ ಮಾಲಾಧಾರಿಗಳು, ಭಕ್ತರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರ, ಬಳ್ಳಾರಿ ಜಿಲ್ಲೆಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಬಸ್, ಲಾರಿ, ಕ್ರೂಸರ್, ಕಾರ್, ದ್ವಿಚಕ್ರ ವಾಹನಗಳ ಮೂಲಕ ಬರುವವರಿಗೆ ಹನುಮ ಗಂಗಾವತಿ ಮಹಾರಾಣಾ ಪ್ರತಾಪ ಸರ್ಕಲ್, ಕಂಪ್ಲಿ ವೃತ್ತ, ಕನಕದಾಸ ವೃತ್ತ, ನೀಲಕಂಠೇಶ್ವರ ವೃತ್ತ, ಬಸ್‌ಸ್ಟ್ಯಾಂಡ್, ಕಡೇಬಾಗಿಲು ಮಾರ್ಗವಾಗಿ ಆನೆಗುಂದಿಗೆ ಬಂದು ಪಾರ್ಕಿಂಗ್ ಮಾಡಬಹುದಾಗಿದೆ.ಆನೆಗುಂದಿ ಉತ್ಸವ ಸ್ಥಳದಲ್ಲಿ ಬಸ್, ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ. ಕ್ರೂಸರ್, ಕಾರ್, ದ್ವಿಚಕ್ರ ವಾಹನಗಳ ಮೂಲಕ ಬಂದ ಹನುಮ ಮಾಲಾಧಾರಿಗಳು, ಭಕ್ತರಿಗೆ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ನಿಗದಿಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬಹುದು. ಪಾರ್ಕಿಂಗ್ ಸ್ಥಳದಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.ಎಲ್ಲೆಲ್ಲಿ ಪಾರ್ಕಿಂಗ್?: ಆನೆಗುಂದಿ ಪೆಟ್ರೋಲ್ ಬಂಕ್ ಹತ್ತಿರ ಕ್ರೂಸರ್/ಕಾರ್ ಪಾರ್ಕಿಂಗ್, ಆನೆಗುಂದಿ ಉತ್ಸವ ಸ್ಥಳದ ಹತ್ತಿರ ಬಸ್, ಮಿನಿ ಬಸ್ ಪಾರ್ಕಿಂಗ್, ಡಿ.ಪಿ. ಕ್ರಾಸ್ ಹಿಂದೆ, ತಳವಾರಘಟ್ಟ ರಸ್ತೆಯಲ್ಲಿ ಕ್ರೂಸರ್/ಕಾರ್ ಪಾರ್ಕಿಂಗ್, ಡಿ.ಪಿ. ಕ್ರಾಸ್ ದುರ್ಗಾಬೆಟ್ಟ ರಸ್ತೆಯ ಮಂಟಪದ ಮುಂಭಾಗ ಕ್ರೂಸರ್/ಕಾರ್ ಪಾರ್ಕಿಂಗ್, ಸೇಮ್ ಪ್ಲೆಸ್ ರೆಸ್ಟೋರೆಂಟ್ ಹಿಂಭಾಗ ಕ್ರೂಸರ್/ಕಾರ್ ಪಾರ್ಕಿಂಗ್, ಪಂಪಾ ಸರೋವರ ಕ್ರಾಸ್ ಹತ್ತಿರ ರಸ್ತೆಯ ಇಲ್ಲೂರ ರಾಮಕೃಷ್ಣ ಅವರ ಹೊಲದಲ್ಲಿ ಕ್ರೂಸರ್/ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಹನುಮಮಾಲಾಧಾರಿಗಳು, ಭಕ್ತರು ಅಂಜನಾದ್ರಿ ಬೆಟ್ಟದ ಮುಂಭಾಗದ ಮೆಟ್ಟಿಲುಗಳಿಂದ ಏಕಮುಖವಾಗಿ ಹತ್ತುವುದಕ್ಕೆ ಮತ್ತು ಹಿಂಭಾಗದ ಮೆಟ್ಟಿಲುಗಳಿಂದ ಏಕಮುಖವಾಗಿ ಇಳಿಯಲು ವ್ಯವಸ್ಥೆ ಮಾಡಲಾಗಿದೆ. ಮಾಲಾಧಾರಿಗಳು, ಭಕ್ತರು ಬೆಲೆಬಾಳುವ ವಸ್ತುಗಳು, ಮೊಬೈಲ್, ಹಣ ಹಾಗೂ ಇನ್ನಿತರ ವಸ್ತುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಬೇಕು. ನಂತರ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.ಮಾಲಾಧಾರಿಗಳು, ಭಕ್ತರಿಗೆ ಅಂಜನಾದ್ರಿ ಬೆಟ್ಟದ ಹಿಂಭಾಗದಲ್ಲಿರುವ ವೇದಪಾಠ ಶಾಲೆಯ ಹತ್ತಿರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನೆಗೆ ಬರುವ ವಿವಿಧ ಜಿಲ್ಲೆಗಳ ಭಕ್ತರು ವಾಹನಗಳಲ್ಲಿ ಆಗಮಿಸುವವರಿಗೆ ನಿಗದಿತ ಮಾರ್ಗ ಸೂಚಿಸಲಾಗಿದೆ. ಸುಗಮ ಸಂಚಾರಕ್ಕೆ ಈ ವ್ಯವಸ್ಥೆ ಕೈಗೊಳ್ಳಲಾಗಿದೆ. ಭಕ್ತರು ನಿಗದಿತ ಸ್ಥಳಗಳ ಮೂಲಕ ಆಗಮಿಸಿ ನಿಗದಿ ಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದೆ ಎಂದು ಎಸ್ಪಿ ಯಶೋದಾ ವಂಟಿಗೋಡಿ ಹೇಳಿದರು.