ಮುಂಗಾರು ಬೆಳೆಗಳಿಗೆ ಬಸವನ ಹುಳುಗಳ ಬಾಧೆ!

| Published : Jul 13 2025, 01:18 AM IST

ಸಾರಾಂಶ

ಈ ಬಸವನಹುಳುಗಳನ್ನು ನಿಯಂತ್ರಿಸಬೇಕೆಂದರೆ ಕೀಟನಾಶಕ ಸಿಂಪಡಿಸಬೇಕು. ಆದರೆ, ಮಳೆ ನಿರಂತರವಾಗಿ ಬರುತ್ತಿದ್ದು, ಕೀಟನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ರಾತ್ರಿ ಹೊತ್ತು ಬೆಳೆ ನಾಶ ಮಾಡಿ ಹಗಲೊತ್ತಿನಲ್ಲಿ ಮಣ್ಣಿನೊಳಗೆ ಹುದುಗಿರುವ ಬಸವನ ಹುಳುವನ್ನು ಕೂಲಿಯಾಳುಗಳೊಂದಿಗೆ ರೈತರು ಮಣ್ಣಿನಿಂದ ಹೊರ ತೆಗೆದು ನಾಶ ಮಾಡುವ ಸ್ಥಿತಿ ಬಂದಿದೆ.

ಬಸವರಾಜ ಹಿರೇಮಠ

ಧಾರವಾಡ: ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಧಾರವಾಡ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಮುಂಗಾರು ಬೆಳೆಗಳಿಗೆ ಕಂಟಕ ಎದುರಾಗಿದೆ. ಬೆಳೆಗಳಿಗೆ ಬಸವನ ಹುಳು ಬಾಧೆ ಉಂಟಾಗಿದ್ದು, ರೈತರಿಗೆ ಬೆಳೆಗಳ ಇಳುವರಿಯ ಆತಂಕ ಶುರುವಾಗಿದೆ.

ಈ ಬಾರಿ ರಾಜ್ಯದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಬೇಗ ಬಂದಿದ್ದು, ರೈತರು ಸಹ ಖುಷಿ ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಮೇ ಅಂತ್ಯದಿಂದ ಬರುತ್ತಿರುವ ಮಳೆ ಜಿಲ್ಲೆಯ ಪೈಕಿ ಧಾರವಾಡ ಸುತ್ತಲು ಈಗಲೂ ನಿಂತಿಲ್ಲ. ಆಗಾಗ ತುಸು ಬಿಸಿಲಿನ ಮುಖ ಕಂಡರೂ ಮಳೆ ಮಾತ್ರ ನಿರಂತರವಾಗಿದೆ. ಎಡೆ ಕುಂಟಿ ಹೊಡೆಯುವುದು, ಕೀಟನಾಶಕ ಸಿಂಪರಣೆ ಸೇರಿದಂತೆ ಯಾವುದೇ ಕೃಷಿ ಚಟುವಟಿಕೆಗಳಿಗೆ ಮಳೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಬಹುತೇಕ ಮುಂಗಾರು ಬೆಳೆಗಳು ಬಸವನ ಹುಳುಗಳ ಹೊಟ್ಟೆ ಸೇರುತ್ತಿದೆ.

ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ, ಅಳ್ನಾವರ ಹೀಗೆ ಧಾರವಾಡ ಹೊರತು ಪಡಿಸಿ ಜಿಲ್ಲೆಯ ವಿವಿಧೆ ಬೆಳೆಗಳ ಬೆಳವಣಿಗೆ ತೃಪ್ತಿಕರವಾಗಿವೆ. ಧಾರವಾಡದಲ್ಲೂ ಇಷ್ಟು ದಿನ ಉತ್ತಮವಾಗಿಯೇ ಇದ್ದ ಬೆಳೆಗಳಿಗೆ ಅದರಲ್ಲೂ ಉದ್ದು, ಶೇಂಗಾ ಬೆಳೆಗಳಿಗೆ ಎರಡು ವಾರಗಳಿಂದ ಈ ಬಸವನ ಹುಳು ಕಾಟ ಜೋರಾಗಿದೆ. ಧಾರವಾಡ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಉದ್ದು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 8755 ಹೆಕ್ಟೇರ್ ಪೈಕಿ ಧಾರವಾಡ ತಾಲೂಕಿನಲ್ಲಿಯೇ 7027 ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಇದೆ. ಅದೇ ರೀತಿ 2250 ಹೆಕ್ಟೇರ್‌ ಶೇಂಗಾ, 13821 ಹೆಸರು ಬೆಳೆಯುತ್ತಿದ್ದು ಈ ಬೆಳೆಗಳನ್ನು ಬಸವನ ಹುಳುಗಳು ತಿಂದು ಹಾಕಿ, ಚಿವುಟಿ ಒಗೆಯುತ್ತಿವೆ.

ಮಣ್ಣಿನಲ್ಲಿ ಮರೆಯಾಗುವ ಹುಳು: ಈ ಬಸವನಹುಳುಗಳನ್ನು ನಿಯಂತ್ರಿಸಬೇಕೆಂದರೆ ಕೀಟನಾಶಕ ಸಿಂಪಡಿಸಬೇಕು. ಆದರೆ, ಮಳೆ ನಿರಂತರವಾಗಿ ಬರುತ್ತಿದ್ದು, ಕೀಟನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ರಾತ್ರಿ ಹೊತ್ತು ಬೆಳೆ ನಾಶ ಮಾಡಿ ಹಗಲೊತ್ತಿನಲ್ಲಿ ಮಣ್ಣಿನೊಳಗೆ ಹುದುಗಿರುವ ಬಸವನ ಹುಳುವನ್ನು ಕೂಲಿಯಾಳುಗಳೊಂದಿಗೆ ರೈತರು ಮಣ್ಣಿನಿಂದ ಹೊರ ತೆಗೆದು ನಾಶ ಮಾಡುವ ಸ್ಥಿತಿ ಬಂದಿದೆ.

ರೈತರಿಗೆ ಸಂಕಷ್ಟ: ಪ್ರಸ್ತುತ ಎಲ್ಲ ಮುಂಗಾರು ಬೆಳೆಗಳಿಗೆ ಬಿಸಿಲಿನ ಅವಶ್ಯಕತೆ ಇದೆ. ಆದರೆ, ಬಿಟ್ಟು ಬಿಡದೇ ಮಳೆ ಸುರಿಯತ್ತಿರುವ ಕಾರಣ ಒಂದು ಕಡೆ ಬೆಳೆ ನಾಶದ ಆತಂಕದ ಜತೆಗೆ ಮತ್ತೊಂದು ಕಡೆ ಸಾವಿರಾರು ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಬಸವನಹುಳು ಬೆಳೆಯನ್ನು ತಿಂದು ಹಾಕುತ್ತಿವೆ. ಉದ್ದು, ಹೆಸರು, ವಟಾಣಿ, ಸೋಯಾಬೀನ್, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಈ ಬಸವನಹುಳುಗಳ ಹೊಟ್ಟೆ ಸೇರುತ್ತಿದೆ. ಇದರಿಂದಾಗಿ ಸಾವಿರಾರು ರುಪಾಯಿ ಖರ್ಚು ಮಾಡಿದ ರೈತರು ಸಂಕಟಪಡುತ್ತಿದ್ದಾರೆ.

ಇಳುವರಿಯಲ್ಲಿ ಇಳಿಕೆ: ಉಳಿದ ಬಗೆಯ ಕೀಟಗಳಿದ್ದರೆ ಕೀಟನಾಶಕ ಸಿಂಪರಿಸಿ ನಿಯಂತ್ರಿಸುತ್ತೇವೆ. ಆದರೆ, ಬಸವನ ಹುಳು ಕೀಟನಾಶಕಗಳಿಗೂ ನಿಯಂತ್ರಣ ಆಗುತ್ತಿಲ್ಲ. ಬಸವನಹುಳು ಕಂಡ ಕೂಡಲೇ ರೈತರು ಬೆಚ್ಚಿ ಬೀಳುವಂತಾಗಿದೆ. ಇವುಗಳನ್ನು ಬೇಗ ನಿಯಂತ್ರಿಸದೇ ಇದ್ದರೆ ಬೆಳೆಯ ಇಳುವರಿಯಲ್ಲಿ ಭಾರೀ ಇಳಿಕೆಯಾಗುತ್ತದೆ. ಹೀಗಾಗಿ ಕೂಲಿಯಾಳುಗಳೊಂದಿಗೆ ಹೊಲಕ್ಕೆ ಹೋಗಿ ಒಂದೊಂದಾಗಿ ಹುಳುಗಳನ್ನು ಆರಿಸುತ್ತಿದ್ದೇವೆ. ಅಷ್ಟಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಯಾದವಾಡ ಗ್ರಾಮದ ರೈತ ಅಜ್ಜಪ್ಪ ಕರಿಕಟ್ಟಿ ಬೇಸರ ವ್ಯಕ್ತಪಡಿಸಿದರು.

ಕಲ್ಲುಪ್ಪು ಸಿಂಪರಿಸಿ: ಧಾರವಾಡ ತಾಲೂಕಿನಲ್ಲಿ ನಿರಂತರ ಮಳೆಯಿಂದ ಬಸವನ ಹುಳುಗಳ ಕಾಟ ಇರುವ ಬಗ್ಗೆ ಮಾಹಿತಿ ಬಂದಿದ್ದು, ಕೃಷಿ ಸಂಶೋಧಕರನ್ನು ಕೂಡಲೇ ಹೊಲಗಳಿಗೆ ಕಳುಹಿಸಿ ಅದರ ನಿಯಂತ್ರಣ ಕುರಿತು ರೈತರಿಗೆ ಕ್ರಮ ವಹಿಸಲು ತಿಳಿಸಲಾಗುವುದು. ಆ ಹುಳುಗಳನ್ನು ನಿಯಂತ್ರಿಸಲು ರೈತರು ನಸುಕಿನಲ್ಲಿಯೇ ಹೋಗಿ ಅವುಗಳ ಮೇಲೆ ಕಲ್ಲುಪ್ಪು ಸಿಂಪರಿಸಿದರೆ ನಿಯಂತ್ರಣಕ್ಕೆ ಬರಲಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಹೇಳಿದರು.