ಉತ್ತರಾಖಂಡದಲ್ಲಿ ಹಿಮಪಾತ: ಹುಬ್ಬಳ್ಳಿ ಮೂಲದ ದಂಪತಿ ಸಾವು

| Published : Jun 07 2024, 12:34 AM IST

ಸಾರಾಂಶ

ಕರ್ನಾಟಕದಿಂದ 22 ಜನ ಚಾರಣಕ್ಕೆ ಹೋಗಿದ್ದರು. ಅದರಲ್ಲಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ ಹಾಗೂ ಸುಜಾತಾ ಎಂಬ ದಂಪತಿ ಕೂಡ ಇದ್ದಾರೆ.

ಹುಬ್ಬಳ್ಳಿ:

ಉತ್ತರಾಖಂಡದಲ್ಲಿ ನಡೆದ ಹಿಮಪಾತದಿಂದ ಮೃತಪಟ್ಟ 9 ಜನರಲ್ಲಿ ಹುಬ್ಬಳ್ಳಿ ಮೂಲದ ಇಬ್ಬರಿದ್ದಾರೆ.

ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ದಂಪತಿಯೇ ಉತ್ತರಾಖಂಡಕ್ಕೆ ಚಾರಣಕ್ಕೆ ಹೋಗಿ ಮೃತಪಟ್ಟವರು.

ಆಗಿದ್ದೇನು?

ಕರ್ನಾಟಕದಿಂದ 22 ಜನ ಚಾರಣಕ್ಕೆ ಹೋಗಿದ್ದರು. ಅದರಲ್ಲಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ ಹಾಗೂ ಸುಜಾತಾ ಎಂಬ ದಂಪತಿ ಕೂಡ ಇದ್ದಾರೆ.

ಈ ದಂಪತಿ ಮೂಲತಃ ಹುಬ್ಬಳ್ಳಿಯ ಉಣಕಲ್‌ನವರು. ವಿನಾಯಕ ಹಾಗೂ ಸುಜಾತಾ ಇಬ್ಬರು ಬಿವಿಬಿ ಕಾಲೇಜ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದಾರೆ.

ವಿನಾಯಕ ಅವರದು 1991ರ ಬ್ಯಾಚ್‌ ಆಗಿದ್ದರೆ, ಸುಜಾತಾ 1994ರ ಬ್ಯಾಚ್‌. ಈ ದಂಪತಿಗೆ ಇಬ್ಬರು ಮಕ್ಕಳಿದ್ದು ಇವರ ಕುಟುಂಬ ಬೆಂಗಳೂರಲ್ಲಿ ನೆಲೆಸಿದೆ. ಹುಬ್ಬಳ್ಳಿಯಲ್ಲಿ ವಿನಾಯಕ ಅವರ ಸಹೋದರಿಯೊಬ್ಬರು ನೆಲೆಸಿದ್ದಾರೆ. ಈ ದಂಪತಿ ಕರ್ನಾಟಕ ಚಾರಣಿಗರ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್‌ನ ಟ್ರಸ್ಟಿ ಕೂಡ ಹೌದು. ಆಗಾಗ ಚಾರಣಕ್ಕೆಂದು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಿದ್ದರು. ಇದೀಗ ಉತ್ತರಾಖಂಡಕ್ಕೆ ತೆರಳಿದ್ದರು. ಆದರೆ ಅಲ್ಲಿನ ಹವಾಮಾನ ವೈಪರೀತ್ಯದಿಂದ ಈ ದುರ್ಘಟನೆ ನಡೆದಿದೆ.

ಇವರ ಪಾರ್ಥಿವ ಶರೀರ ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿನ ಬನಶಂಕರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿನಾಯಕ ಅವರ ಸ್ನೇಹಿತ ಗಂಗಾಧರ ವಾಲಿ ತಿಳಿಸಿದ್ದಾರೆ.

ಬಿವಿಬಿ ಕಾಲೇಜ್‌ನ ಅವರ ಸ್ನೇಹಿತರು, ಕುಟುಂಬದ ಸದಸ್ಯರು ಕಂಬನಿ ಮಿಡಿದಿದ್ದಾರೆ.