ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಜನರಿಗೆ ಸ್ಥೈರ್ಯ ತುಂಬುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಅಗರಖೇಡ ವಲಯ ಲಚ್ಯಾಣ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ,, ಗ್ರಾಮ ಪಂಚಾಯಿತಿ ಲಚ್ಯಾಣ ಸಹಯೋಗದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಉದ್ದಗಲಕ್ಕೂ ಬಡವ, ಬಲ್ಲಿದರಿಗೆ ಆರ್ಥಿಕವಾಗಿ ಸಾಲ, ಸೌಲಭ್ಯಗಳನ್ನು ನೀಡಿ ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುತ್ತಿರುವ ಏಕೈಕ ಸಂಘ ಸಂಸ್ಥೆ ಇದಾಗಿದೆ. ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಸ್ವ ಉದ್ಯೋಗ ಕಲ್ಪಿಸಲು ಆರ್ಥಿಕವಾಗಿ ಸಹಾಯ ಮಾಡಿ, ಹಣ ಉಳಿಕೆಯ ಮಾರ್ಗೋಪಾಯವನ್ನು ತಿಳಿಸಿ, ಕೌಟುಂಬಿಕವಾಗಿ ಸುಖಿ ಸಂಸಾರ ಸಾಗಿಸಲು ಮದ್ಯಪಾನ ಹಾಗೂ ದುಶ್ಚಟಗಳನ್ನು ದೂರ ಮಾಡಿ ಸಾಮಾಜಿಕವಾಗಿ ಜನರನ್ನು ಸುಸಂಸ್ಕೃತರನ್ನಾಗಿಸಲು ಸಂಸ್ಥೆಯೂ ಸೇವೆ ಮಾಡುತ್ತಿರುವುದು ಸಾರ್ಥಕ ಕಾರ್ಯವಾಗಿದೆ ಎಂದು ಹೇಳಿದರು.ನಾಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಧಾರ್ಮಿಕವಾಗಿ ಭಕ್ತಿ, ಭಾವನೆ ಜತೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸ್ವ ಸಹಾಯ ಸಂಘಗಳ ಮೂಲಕ ಸಮಾಜಿಕವಾಗಿ ಜಾಗೃತಿ ಮೂಡಿಸುತ್ತಿದೆ ಎಂದು ಶ್ಲಾಘಿಸಿದರು.ತಾಲೂಕ ಯೋಜನಾಧಿಕಾರಿ ನಟರಾಜ ಮಾತನಾಡಿ, ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಸಾಲ, ಸೌಲಭ್ಯಗಳ ಜತೆ ಸ್ವಂತ ಶಕ್ತಿಯ ಮೂಲಕ ಸ್ವಾವಲಂಬಿ ಜೀವನ ನಡೆಸಲು ಹತ್ತು ಹಲವು ಯೋಜನೆಗಳಿಂದ ಸುಂದರ ಸಂಸಾರಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಿದರು. ಅಲ್ಲದೇ, ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಸಬಲೆ ಎನಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನಿರ್ವಹಿಸುತ್ತಿರುವ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಡಾ.ವೀರೇಂದ್ರ ಹೆಗ್ಗಡೆ ದಂಪತಿ ಮಾರ್ಗದರ್ಶನದಲ್ಲಿ ನಾಡಿನ ಮೂಲೆ ಮೂಲೆಗಳಲ್ಲೂ ತನ್ನ ಸೇವೆಯನ್ನು ಯಶಸ್ವಿಯಾಗಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗೆ ಬದ್ಧವಾಗಿದೆ ಎಂದು ತಿಳಿಸಿದರು.
ವಿಜಯಪುರದ ಶಂಕರಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಾಶೀನಾಥ್ ಅವಜಿ, ಸದಸ್ಯರಾದ ರಾಜು ನದಾಫ್, ಮುಖಂಡರಾದ ಡಿ.ಎ.ಮುಜಗೊಂಡ, ಮಲಕಣ್ಣ ಬಿರಾದಾರ, ಯಶವಂತ ಬಿರಾದಾರ, ವಲಯದ ಮೇಲ್ವಿಚಾರಕ ಹುಸೇನ ಸಾಬ್, ಶುದ್ಧ ಗಂಗಾ ಮೇಲ್ವಿಚಾರಕ ಬಸವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರೀ, ಮೇಲ್ವಿಚಾರಕಿ ಅಶ್ವಿನಿ, ಸವಿತಾ, ಸೇವಾ ಪ್ರತಿನಿಧಿ ಭೌರಮ್ಮ, ಸಂಗೀತಾ, ಪ್ರಭಾವತಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.