ಪ್ರಾದೇಶಿಕವಾಗಿ ಭಾಷೆಗಳು ವಿಭಿನ್ನವಾಗಿದ್ದರೂ ಮಾನವರೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸಮಾಜದಲ್ಲಿ ಸಮಾನತೆ ನೆಲೆಸಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿಯಬೇಕು.

ಧಾರವಾಡ:

ಪ್ರತಿಯೊಬ್ಬರ ಸಾಮಾಜಿಕ ಮನಸ್ಥಿತಿ ಪರಿವರ್ತನೆ ಆದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಭಾಷೆ, ಧರ್ಮ, ಜಾತಿ ಹಾಗೂ ಲಿಂಗದ ಆಧಾರದಲ್ಲಿ ಸಮಾಜದಲ್ಲಿ ಕಂಡುಬರುವ ತಾರತಮ್ಯ ತೊಡೆದು ಹಾಕಿ, ಸಾಮಾಜಿಕ ಸಮಷ್ಠಿಗೋಸ್ಕರ ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಿ ಬದುಕಬೇಕು ಎಂದು ಸಾಹಿತಿ ಪ್ರಾಚಾರ್ಯ ಡಾ. ಅರ್ಜುನ ಪಂಗಣ್ಣನವರ ಹೇಳಿದರು.

ಕವಿವಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠವು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ‘ವಾಲ್ಮೀಕಿ, ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಈ ಎಲ್ಲ ಮಹಾನ್ ವ್ಯಕ್ತಿಗಳು ತಮ್ಮ ವಿಚಾರಧಾರೆಗಳ ಮೂಲಕ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.

ಪ್ರಾದೇಶಿಕವಾಗಿ ಭಾಷೆಗಳು ವಿಭಿನ್ನವಾಗಿದ್ದರೂ ಮಾನವರೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸಮಾಜದಲ್ಲಿ ಸಮಾನತೆ ನೆಲೆಸಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ವಿದ್ಯಾರ್ಥಿಗಳು ಗೌತಮ ಬುದ್ಧನ ಸಹನೆ ಮತ್ತು ತ್ಯಾಗ, ಬಸವಣ್ಣನವರ ಮಾನವೀಯತೆ, ಡಾ. ಬಿ.ಆರ್. ಅಂಬೇಡ್ಕರ್ ಹಕ್ಕು, ಸಮಾನತೆ ಚಿಂತನೆಗಳು ಹಾಗೂ ಮಹರ್ಷಿ ವಾಲ್ಮೀಕಿಯವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಪ್ರೊ. ಜಿ.ಎಸ್. ವೇಣುಮಾಧವ ಸ್ವಾಗತಿಸಿದರು. ಆದಿಕವಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕ ಡಾ. ರಾಮಾಂಜುನೆಯಲು ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಪ್ರಭಾರ ಕುಲಸಚಿವ ಡಾ. ಅರವಿಂದ್ ವಿ. ಕರಬಸನಗೌಡರ, ಮೌಲ್ಯಮಾಪನ ಕುಲಸಚಿವ ಎ.ಎಂ. ಕಡಕೋಳ, ಹಣಕಾಸು ಅಧಿಕಾರಿ ಪ್ರದೀಪ್ ಕುಮಾರ್, ಡಾ. ಸದಾಶಿವ ಮರ್ಜಿ, ಡಾ. ವೆಂಕಟಗಿರಿ ದಳವಾಯಿ ಇದ್ದರು. ಇದಕ್ಕೂ ಮುಂಚೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣೆಗೆ ನಡೆಯಿತು.