ನಾಟಕಗಳಿಂದ ಸಾಮಾಜಿಕ ಬದಲಾವಣೆ

| Published : May 05 2025, 12:49 AM IST

ಸಾರಾಂಶ

ತಾಯಿ ಮತ್ತು ಮಗುವಿನ ಸಂಬಂಧದಂತೆ ರಂಗಭೂಮಿ ಹಾಗೂ ಕಲಾವಿದನ ನಡುವೆ ಸಂಬಂಧವಿದೆ

ಕೊಪ್ಪಳ(ಯಲಬುರ್ಗಾ): ನಾಟಕಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಯುವ ಮುಖಂಡ ಅಂದಾನಗೌಡ ಪೊಲೀಸ್‌ಪಾಟೀಲ ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದಲ್ಲಿ ಶ್ರೀಶರಣಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಯುವ ನಾಟ್ಯ ಸಂಘದಿಂದ ಜರುಗಿದ ರೈತನ ರಾಜ್ಯದಲ್ಲಿ ರಾಕ್ಷಸನ ಆರ್ಭಟ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮತ್ತು ಮಗುವಿನ ಸಂಬಂಧದಂತೆ ರಂಗಭೂಮಿ ಹಾಗೂ ಕಲಾವಿದನ ನಡುವೆ ಸಂಬಂಧವಿದೆ. ನಟನೆಯಲ್ಲಿ ತೊಡಗಿಸಿಕೊಳ್ಳಲು ಶಿಸ್ತು, ಸಂಯಮ ಅಗತ್ಯ. ಯುವಕರು ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಇಂದಿನ ಟಿವಿ ಮಾಧ್ಯಮದ ನವಯುಗದಲ್ಲಿಯೂ ಗ್ರಾಮೀಣ ಪ್ರದೇಶದ ಜನರು ನಾಟಕ, ದೊಡ್ಡಾಟದಂತ ಕಲೆ ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ತೋಟಗಾರಿಕೆ ಇಲಾಖೆ ನೌಕರ ಗುರುನಾಥ ಅಟಮಾಳಗಿ ಮಾತನಾಡಿ, ಮಾರನಾಳ ಗ್ರಾಮ ಕಲಾವಿದರ ತವರೂರಾಗಿದೆ. ಪ್ರತಿ ವರ್ಷ ಹಬ್ಬ, ಜಾತ್ರೆ ಸಂದರ್ಭದಲ್ಲಿ ನಾಟಕ ಅಭಿನಯಿಸುತ್ತಾ ರಂಗಭೂಮಿ ಕಲೆ ಉಳುವಿಗೆ ಯುವಕರು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾಟಕಗಳಿಂದ ಜನರಿಗೆ ಮನರಂಜನೆ ಜತೆಗೆ ಸಮಾಜದ ಅಂಕು-ಡೊಂಕು ತಿದ್ದಲು ಸಹಕಾರಿಯಾಗಲಿದೆ. ಇತ್ತೀಚೆಗೆ ಮೊಬೈಲ್ ಹಿಡಿದು ಕರೋಕೆ ಹಾಡು ಹಾಡುವವರ ಸಂಖ್ಯೆ ಹೆಚ್ಚಾಗಿದೆ. ಬೆಳಕು ಹರಿಯುವದರೊಳಗೆ ದೊಡ್ಡ ಕಲಾವಿದರಂತೆ ಬಿಂಬಿಸಿಕೊಳ್ಳುತ್ತಾರೆ. ನಮ್ಮ ಗ್ರಾಮದಲ್ಲಿ ಅಭಿನಯಿಸುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ನಮ್ಮಲ್ಲಿ ಬರಬೇಕು ಎಂದರು.

ಕವಿ ಶಂಕರ ನಾಯಕ, ಪತ್ರಕರ್ತ ಮಲ್ಲು ಮಾಟರಂಗಿ ಮಾತನಾಡಿದರು. ಅರ್ಚಕ ರೇವಣಸಿದ್ದಯ್ಯ ಹಿರೇಮಠ, ಶರಣಪ್ಪ‌ ಕುರಿ, ಚಂದುಲಾಲ ಪೂಜಾರ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಬಾಳಪ್ಪ‌ ಕುರಿ, ಸಂಗಪ್ಪ ನಿಡಗುಂದಿ, ಪರಸಪ್ಪ ಪೂಜಾರ, ಖಾಸಿಂಸಾಬ್‌ ದಪೇದ, ರಂಗಪ್ಪ ರಾಠೋಡ, ಮಾರುತಿ ಹುಂಡಿ, ರಾಮಣ್ಣ ಮಸಾಲಿ, ಮಲ್ಲಪ್ಪ‌ ಪರಸಲ್, ಶರಣಪ್ಪ‌ ಕುರಿ, ರಾಮಣ್ಣ ನಾಯಕ, ಪ್ರಭುರಾಜ‌ ಮದಲಗಟ್ಟಿ, ಮರ್ದಾನಸಾಬ್‌, ಪವಾಡೆಪ್ಪ, ಕುಮಾರ ಇತರರು ಇದ್ದರು.