ಸಾಮಾಜಿಕ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿ ವೃದ್ಧಿಗೆ ಕಾರಣ: ರಾಜೀವ ನಾಯ್ಕ

| Published : Oct 09 2024, 01:43 AM IST

ಸಾಮಾಜಿಕ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿ ವೃದ್ಧಿಗೆ ಕಾರಣ: ರಾಜೀವ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಿಂದ ನೆರವು ಪಡೆದು ಸಶಕ್ತರಾದವರು ಮರಳಿ ಸಮಾಜದ ಋಣ ತೀರಿಸಬೇಕು. ನಾಮಧಾರಿ ಸಮಾಜವು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಬೆಳೆಯಬೇಕು.

ಕುಮಟಾ: ಯಾವುದೇ ಸಮಾಜದಲ್ಲಿ ವಿಭಿನ್ನ ಬಣಗಳಿರದೇ ಒಗ್ಗಟ್ಟಿರಬೇಕು. ಹಿಂದುಳಿದ ಸಮಾಜಗಳ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆ ಎಂದು ಹಿರೇಗುತ್ತಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ರಾಜೀವ ಎನ್. ನಾಯ್ಕ ತಿಳಿಸಿದರು.ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಆರ್ಯ ಈಡಿಗ ನಾಮಧಾರಿ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ನಾಗರಾಜ ನಾಯ್ಕ ಮಾತನಾಡಿ, ಸಮಾಜದಿಂದ ನೆರವು ಪಡೆದು ಸಶಕ್ತರಾದವರು ಮರಳಿ ಸಮಾಜದ ಋಣ ತೀರಿಸಬೇಕು. ನಾಮಧಾರಿ ಸಮಾಜವು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಬೆಳೆಯಬೇಕು. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಕ್ಕೆ ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು ಎಂದರು. ಅತಿಥಿ ಬರ್ಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಧುಕರ ಕೆ. ನಾಯ್ಕ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಸಮಾಜದ ಮಕ್ಕಳು ಸಿದ್ಧಪಡಿಸುವ ಯೋಜನೆಯನ್ನು ರೂಪಿಸಿದರೆ ಸಮಾಜ ಬಲಗೊಳ್ಳಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್. ನಾಯ್ಕ ಮಾತನಾಡಿ, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಪ್ರತಿಭಾ ಪುರಸ್ಕಾರ ಮಾತ್ರವಲ್ಲದೇ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡಲು ಸಂಘಟನೆ ಉತ್ಸುಕವಿದೆ. ಸಮಾಜದ ಸಹಯೋಗ ಬೇಕು ಎಂದರು.ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಕಾಶ ಡಿ. ನಾಯ್ಕ ಅಳ್ವೆದಂಡೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಗಲಾ ಕೆ. ನಾಯ್ಕ, ಯಕ್ಷಗಾನ ಭಾಗವತ ಅಶೋಕ ನಾಯ್ಕ ತದಡಿ, ಕೃಷಿ ಸಾಧಕ ನಾಗರಾಜ ನಾಯ್ಕ ಕಾಗಾಲ, ಸಮಯಪ್ರಜ್ಞೆಯಿಂದ ರೈಲ್ವೆ ದುರಂತ ತಪ್ಪಿಸಿದ್ದ ಮಾದೇವ ನಾಯ್ಕ ಮತ್ತು ಕ್ರೀಡಾ ಸಾಧಕ ರಾಘವೇಂದ್ರ ನಾಯ್ಕ ಅಳ್ವೆಕೋಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ. ೯೦ಕ್ಕೂ ಅಧಿಕ ಅಂಕ ಗಳಿಸಿದವರಿಗೆ ಪುರಸ್ಕರಿಸಲಾಯಿತು. ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು. ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ ನಾಯ್ಕ ನಿರೂಪಿಸಿದರು. ಕಿರಣ ನಾಯ್ಕ ವಂದಿಸಿದರು.