ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯವಾಗಬಹುದು ಎಂದು ಯಡೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ರಾಜೇಶ್ ತಿಳಿಸಿದರು.ಅವರು ಇಲ್ಲಿಗೆ ಸಮೀಪದ ಮಲಂದೂರು ಇತಿಹಾಸ ಪ್ರಸಿದ್ಧವಾದ ಮಹಾತಿನ ಮಠದಲ್ಲಿ ನಡೆದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಳೆಗಳನ್ನು ತೊಡಗಿಸಿಕೊಳ್ಳುವುದರಿಂದ ಮನಸ್ಸು ವಿಶಾಲಗೊಂಡು ಭಾವೈಕ್ಯತೆ ಮೂಡುತ್ತದೆ ಎಂದರು.
ಸಾಗರ ಕಾಸಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ಕವಿಗಳಿಗೆ ಸಾಹಿತಿಗಳಿಗೆ ಬರಹಗಾರರಿಗೆ ಕಲಾವಿದರಿಗೆ ರಾಜಾಶ್ರಯ ದೊರೆಯುತ್ತಿತ್ತು. ಆದರೆ ಈಗ ಸ್ಥಳೀಯ ಆಡಳಿತ ಸಂಸ್ಥೆಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಬೆಳವಣಿಗೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದರು.ಕಸಬಾ ಹೋಬಳಿ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್ ಮಾತನಾಡಿ, ಸಾಹಿತ್ಯ, ಕಥೆ, ಕವನ, ಇವುಗಳನ್ನು ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಅದರ ಅಭಿರುಚಿಯನ್ನು ಬೆಳೆಸಬೇಕು. ಮುಂದಿನ ದಿನಮಾನಗಳಲ್ಲಿ ಸಾಹಿತ್ಯ ಕಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುವಂತೆ ಮಾಡಬೇಕಾಗಿದೆ ಎಂದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಹೆಚ್. ಕೆ.ನಾಗಪ್ಪ ವಹಿಸಿದ್ದು, ಮಕ್ಕಳ ಕವಿಗೋಷ್ಠಿಯನ್ನು ಇಂಪನಾ ವಹಿಸಿದ್ದರು. ದಸರಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಮಾಜ ಸೇವೆ ಸಲ್ಲಿಸಿದ ಕ್ಲೈಮoಟ್ ರೆಬೋಲ್ಲೋ ಯಡೇಹಳ್ಳಿ, ಚೌಡಪ್ಪ ಆನಂದಪುರ, ಮುನೀರ್ ಯಡೇಹಳ್ಳಿ ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಚಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಕಲೀಮುಲ್ಲಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಾಂತ ನಾಯಕ್, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ಜಯಾವುಲ್ಲ, ಗಣಪತಿ, ಕೆಳದಿ ವೆಂಕಟೇಶ್ ಜಾಯ್ಸ್, ಸೇರಿದಂತೆ ಅನೇಕರಿದ್ದರು.