ಶಾಂತಿ, ಸಹಬಾಳ್ವೆಗೆ ಸಾಮಾಜಿಕ ನ್ಯಾಯ ಅಗತ್ಯ: ನ್ಯಾಯಾಧೀಶ ಬಿ.ಆರ್. ಮುತಾಲಿಕದೇಸಾಯಿ

| Published : Mar 01 2025, 01:06 AM IST

ಸಾರಾಂಶ

ಕಾನೂನು ಅರಿವು ಹಾಗೂ ನೆರವಿನ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಟೋಲ್ ಫ್ರೀ ಸಹಾಯವಾಣಿ 15100 ಸಂಪರ್ಕಿಸಬಹುದು.

ಹಾವೇರಿ: ಜನತೆಯ ಶಾಂತಿಯುತ, ಸಮೃದ್ಧ ಹಾಗೂ ಸಹಬಾಳ್ವೆಗೆ ಸಾಮಾಜಿಕ ನ್ಯಾಯ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ತಿಳಿಸಿದರು.ಡಾ. ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬೇಕು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಕಾನೂನು ಅರಿವು ಹಾಗೂ ನೆರವಿನ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಟೋಲ್ ಫ್ರೀ ಸಹಾಯವಾಣಿ 15100 ಸಂಪರ್ಕಿಸಬಹುದು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕ ಎನ್.ಎನ್. ಡಿಳ್ಳೆಪ್ಪನರ ಅವರು ವಿಶ್ವ ಸಾಮಾಜಿಕ ನ್ಯಾಯ ಸಿದ್ಧಾಂತದ ಕುರಿತು ಉಪನ್ಯಾಸ ನೀಡಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ ಹಾಗೂ ನಿಲಯ ಪಾಲಕಿ ನಂದಾ ಹೂಗಾರ ಅವರು ಉಪಸ್ಥಿತರಿದ್ದರು. ಮೈಕ್ರೋ ಫೈನಾನ್ಸ್ ನೋಂದಣಿಗೆ ನಿರ್ದೇಶನ

ಹಾವೇರಿ: ಕಿರುಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ, ಜಾರಿಯಾದ ಫೆ. 12ರಿಂದ ಮೂವತ್ತು ದಿನಗಳೊಳಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಅಂದರೆ ಜಿಲ್ಲಾಧಿಕಾರಿಗಳ ಮುಂದೆ ನೋಂದಣಿಗಾಗಿ ಅರ್ಜಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಂಹಾತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ, 2025 ಹೊರಡಿಸದೆ.ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ, 2025ರ ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರ ನೋಂದಣಿ ಕುರಿತಂತೆ ಕ್ರಮ ಕೈಗೊಳ್ಳಲು ಸಿಬ್ಬಂದಿ ತಂಡವನ್ನು ರಚಿಸಿ ಅದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ನೋಂದಣಿಗೆ ಶಿರಸ್ತೇದಾರ ಶೋಭಾ ಹುಲ್ಲಣ್ಣನವರ(ಮೊ. 6362392270), ಪ್ರಥಮ ದರ್ಜೆ ಸಹಾಯಕರಾದ ಹರೀಶ ಧೂಳಪ್ಪನವರ(ಮೊ. 7892129042), ಮಹದೇವ ಜಕ್ಕಿನಕಟ್ಟಿ(ಮೊ. 9741268574) ಹಾಗೂ ದ್ವಿತೀಯ ದರ್ಜೆ ಸಹಾಯಕ ನವೀನ ಹಿಂಚಿಗೇರಿ(ಮೊ. 7892403197) ಅವರನ್ನೊಳಗೊಂಡ ತಂಡ ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.