ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿಂದಿನ ಕಾಲದಿಂದಲೂ ಕಾಂಗ್ರೆಸ್ ಸರ್ಕಾರ ಸಮಾಜದ ಅತ್ಯಂತ ಕಟ್ಟಕಡೆಯ ಜನ ಸಮುದಾಯ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ರೂಪಿಸಿದೆ. ಜೊತೆಗೆ ಅವುಗಳನ್ನು ಅನುಷ್ಠಾನಗೊಳಿಸುತ್ತ ಬಂದಿದೆ. ಆ ಮೂಲಕ ಅವರಿಗೂ ಸಾಮಾಜಿಕ ನ್ಯಾಯಾ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಇದು ಸ್ವತಃ ಆ ವರ್ಗಗಳ ಫಲಾನುಭವಿಗಳ ಅನುಭವದಲ್ಲಿಯೇ ಇದೆ ಎಂದು ಶಾಸಕ ಡಿ.ಜಿ.ಶಾಂತನ ಗೌಡ ಹೇಳಿದರು.ಸೋಮವಾರ ಪಟ್ಟಣದ ಶಿವಮೊಗ್ಗ ರಸ್ತೆಯ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ತಲಾ ₹2 ಸಾವಿರ ಮೌಲ್ಯದ 750 ಕಿಟ್‌ಗಳು ಬಂದಿವೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗೆ ಅಗತ್ಯವಾದ ಮೂಲೆಮಟ್ಟ, ಹಾರೆ, ಸಲಿಕೆ, ಗುದ್ದಲಿ, ಅಳತೆ ಟೇಪ್, ನೀರಿನ ಸಮತಟ್ಟು ಅಳೆಯುವ ಉಪಕರಣ ಹೀಗೆ ಅಗತ್ಯ ಸಲಕರಣೆಗಳ ಕಿಟ್‌ಗಳು ಹಾಗೂ ಕಾರ್ಮಿಕ ಮಹಿಳೆಯರಿಗೆ ನ್ಯೂಟ್ರಿಷಿಯನ್ ಔಷಧಗಳ ಸುಮಾರು 850 ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ತಮ್ಮ ಸರ್ಕಾರ ಶ್ರಮಿಕ ವರ್ಗದ ಹಿತಚಿಂತನೆ ಇಟ್ಟುಕೊಂಡು ಅವರ ದುಡಿಮೆಗೆ ಪೂರಕವಾದ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ ಯಾರು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೋ ಅಂಥವರಿಗೆ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.ಕಾರ್ಮಿಕ ಕುಟುಂಬದ ಮಹಿಳೆಯವರು ಬಹುಪಾಲು ಅಪೌಷ್ಠಿಕತೆಯಿಂದ ಬಳಲುತ್ತಿರುವ ಸಂದರ್ಭಗಳೇ ಹೆಚ್ಚಾಗಿವೆ. ಈ ಕಾರಣ ಅರಿತ ಸರ್ಕಾರ ಕಾರ್ಮಿಕ ಮಹಿಳೆಯವರಿಗೆ ಕೂಡ ಪೌಷ್ಠಿಕತೆ ಔಷಧಗಳಿರುವ ಸುಮಾರು 850 ಕಿಟ್‌ಗಳು, ರಸ್ತೆ ನಿರ್ಮಾಣ ಕಾರ್ಮಿಕರಿಗೆ 130 ಕಿಟ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುತ್ತಿದೆ ಎಂದರು.
ಸೌಲಭ್ಯ ವಿಸ್ತರಿಸುವ ಚಿಂತನೆ:ಸರ್ಕಾರ ಈಗಾಗಾಲೇ ಪಟ್ಟಣ ಪಂಚಾಯಿತಿ, ಪುರಸಭೆ ಹೀಗೆ ಪೌರಾಡಳಿತ ವ್ಯವಸ್ಥೆಯಲ್ಲಿನ ಪೌರ ಕಾರ್ಮಿಕರ 5ನೇ ತರಗತಿ ಮಕ್ಕಳಿಗೆ ಬೇರೆಯವರಂತೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಪ್ರವೇಶ ನೀಡುವ ಯೋಜನೆ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಕೂಡ ಈ ಯೋಜನೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ. ಪ್ರಸ್ತುತ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ 7 ಮೊರಾರ್ಜಿ ದೇಸಾಯಿ ಶಾಲೆಗಳಿವೆ ಎಂದು ಹೇಳಿದರು.
ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ 750 ತರಗಾರ ಕಿಟ್‌ಗಳು, ಮಹಿಳೆಯರಿಗೆ 850 ನ್ಯೂಟ್ರಿಷಿಯನ್ ಕಿಟ್ ಹಾಗೂ ರಸ್ತೆ ನಿರ್ಮಾಣ ಕಾರ್ಮಿಕರಿಗೆ 130 ಕಿಟ್‌ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿ, ಕಾಂಗ್ರೆಸ್ ಯುವ ಮುಖಂಡ ದರ್ಶನ್ ಬಳ್ಳೇಶ್ವರ ಮುಂತಾದವರು ಇದ್ದರು.
- - -ಬಾಕ್ಸ್ ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಮುಮ್ತಾಜ್ ಬೇಗಂ ಮಾತನಾಡಿ, ರಸ್ತೆ ಕಾಮಗಾರಿ ಮಾಡುವ ಕಾರ್ಮಿಕರಿಗೆ ಸದ್ಯ 130 ಕಿಟ್‌ಗಳು ಮಾತ್ರ ಬಂದಿವೆ. ಇವುಗಳನ್ನು ಕೂಡ ವಿತರಣೆ ಮಾಡಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಕಾರ್ಮಿಕರೂ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುವ ಕಾರ್ಮಿಕರಿಗೂ ನೋಂದಣಿ ಆಧರಿಸಿ ಸೌಲಭ್ಯಗಳು ಲಭಿಸಲಿವೆ ಎಂದು ತಿಳಿಸಿದರು.
- - --26ಎಚ್.ಎಲ್.ಐ1:
ಹೊನ್ನಾಳಿ ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ವಿತರಿಸಿದರು.