ಇದೇ ವೇಳೆ ಎಸ್‌ಐಆರ್ ಜಾರಿಯಿಂದ ಆಗುತ್ತಿರುವ ಲೋಪಗಳನ್ನು ಪ್ರಸ್ತಾಪಿಸಿದ ಅವರು, ಇದರಿಂದ ಬುಡಕಟ್ಟು ಹಾಗೂ ಅಲೆಮಾರಿಗಳು ಸೇರಿದಂತೆ ಸುಮಾರು ೬.೫ ಕೋಟಿ ಜನರ ಮತಗಳನ್ನು ಕೈಬಿಡುವ ಕೆಲಸವಾಗುತ್ತಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಆಧುನಿಕ ಭಾರತದ ನಿರ್ಮಾಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಕೇವಲ ಸಂವಿಧಾನ ರಚನೆಗೆ ಸೀಮಿತವಾಗಿಲ್ಲ, ಬದಲಾಗಿ 21ನೇ ಶತಮಾನದ ಸಂಕೀರ್ಣ ಸವಾಲುಗಳಿಗೆ ಅವರ ವಿಚಾರಧಾರೆಗಳೇ ಅಂತಿಮ ಪರಿಹಾರವಾಗಿವೆ. ಸಂವಿಧಾನ ಅನುಸರಿಸುತ್ತಾ ಮನುಸ್ಮೃತಿ ಆಚರಿಸುತ್ತಿದ್ದೇವೆ. ಸಂವಿಧಾನವನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದು ಬೆಂಗಳೂರಿನ ಲೇಖಕರು ಹಾಗೂ ಹೋರಾಟಗಾರ ಶಿವಸುಂದರ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ: 21ನೇ ಶತಮಾನದ ಭಾರತದಲ್ಲಿ ಒಳಗೊಳ್ಳುವಿಕೆ, ಪ್ರಜಾಸತ್ತಾತ್ಮಕತೆ ಮತ್ತು ಸಾಮಾಜಿಕ ನ್ಯಾಯ ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗದೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಬೇಕು ಎಂಬುದು ಬಾಬಾಸಾಹೇಬರ ಆಶಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಒಳಗೊಳ್ಳುವಿಕೆ ಪ್ರಕ್ರಿಯೆಯು ಅಂಬೇಡ್ಕರ್ ಅವರ ಆರ್ಥಿಕ ನೀತಿಗಳ ಅಡಿಪಾಯವಾಗಿದೆ. ಪ್ರಜಾಪ್ರಭುತ್ವ ಎಂದರೆ ಕೇವಲ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವುದಲ್ಲ, ಅದು ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಭ್ರಾತೃತ್ವವನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಅಂತರ್ಜಾತಿ ವಿವಾಹ ಮತ್ತು ಸಾಮಾಜಿಕ ಬೆರೆಯುವಿಕೆಯ ಮೂಲಕ ಮನಸ್ಸುಗಳ ನಡುವಿನ ಗೋಡೆಗಳನ್ನು ಕೆಡವಬೇಕಿದೆ ಎಂದು ಕರೆ ನೀಡಿದರು.ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಸಾಬೀರ್ ಅಹ್ಮದ್ ಮುಲ್ಲಾ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಪ್ರತಿ ಮನೆ ಹಾಗೂ ಪ್ರತಿ ಮನವನ್ನು ತಲುಪಬೇಕು ಎಂದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಅಸಮಾನತೆಯನ್ನು ಅಳಿಸಲು ಶಿಕ್ಷಣವೇ ಏಕೈಕ ಅಸ್ತ್ರವಾಗಿದ್ದು, ಬಡವರು ಮತ್ತು ದಲಿತರು ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾನತೆ ಸಾಧ್ಯ ಎಂದರು.ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಆವತ್ತಿ ರಾಮಯ್ಯ ಮಾತನಾಡಿದರು.
ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಐಐಟಿ ಸಹ ಪ್ರಾಧ್ಯಾಪಕ ಡಾ. ಯಶ್ಪಾಲ್ ಜೋಗ್‌ದಂಡ್ ಅವರು ಮನಸ್ಸು ಮತ್ತು ಸಮಾಜದಲ್ಲಿ ಜಾತಿ ನಿರ್ಮೂಲನೆಯ ಕುರಿತು ಪ್ರಬಂಧ ಮಂಡಿಸಿದರು. ಅಧ್ಯಕ್ಷತೆಯನ್ನು ತುಮಕೂರು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಪರಶುರಾಮ ಕೆ.ಜಿ., ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿ ಮುಂಬೈ ವಿವಿಯ ಪ್ರೊ. ಮೃದುಲ್ ನೀಲೆ ಅವರು ದಲಿತರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರೆ, ಪ್ರಾಧ್ಯಾಪಕರಾದ ಪ್ರೊ. ಶೇಖರ್ ಬಿ. ಅಧ್ಯಕ್ಷತೆ ವಹಿಸಿದ್ದರು. ಮೂರನೇ ಗೋಷ್ಠಿಯಲ್ಲಿ ಕಲಬುರಗಿಯ ಕೇಂದ್ರೀಯ ವಿವಿಯ ಪ್ರೊ. ಅಪ್ಪಗೆರೆ ಸೋಮಶೇಖರ್ ಅವರು ಅಂಬೇಡ್ಕರ್ ಅವರ ಬೌದ್ಧ ತತ್ವಶಾಸ್ತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಾಣಿಜ್ಯ ನಿಕಾಯ ಡೀನ್ ಪ್ರೊ. ಪಿ ಪರಮಶಿವಯ್ಯಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ವಿವಿ ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಎಚ್.ಎಸ್., ತುಮಕೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಕೇಶವ ಹಾಗೂ ತುಮಕೂರು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಪರಶುರಾಮ ಕೆ.ಜಿ., ವಾಣಿಜ್ಯ ನಿಕಾಯ ಡೀನ್ ಪ್ರೊ. ಪಿ ಪರಮಶಿವಯ್ಯ, ಪ್ರಾಧ್ಯಾಪಕರಾದ ಪ್ರೊ. ಶೇಖರ್ ಬಿ., ಉಪಸ್ಥಿತರಿದ್ದರು.
ಎಸ್‌ಐಆರ್ ಜಾರಿಯಿಂದ ಬುಡಕಟ್ಟು ಜನರ ಮತಕ್ಕೆ ಸಂಚಕಾರಇದೇ ವೇಳೆ ಎಸ್‌ಐಆರ್ ಜಾರಿಯಿಂದ ಆಗುತ್ತಿರುವ ಲೋಪಗಳನ್ನು ಪ್ರಸ್ತಾಪಿಸಿದ ಅವರು, ಇದರಿಂದ ಬುಡಕಟ್ಟು ಹಾಗೂ ಅಲೆಮಾರಿಗಳು ಸೇರಿದಂತೆ ಸುಮಾರು ೬.೫ ಕೋಟಿ ಜನರ ಮತಗಳನ್ನು ಕೈಬಿಡುವ ಕೆಲಸವಾಗುತ್ತಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದ್ದರೂ, ಮಾತನಾಡಿದ ನಂತರದ ಸ್ವಾತಂತ್ರ್ಯವಿದೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಚಿಂತನೆಯಂತೆ ಯಾವುದನ್ನೂ ಪ್ರಶ್ನಿಸದೆ ನಂಬಬೇಡಿ. ಇಂದು ನಾವು ಹೇಳಿಕೊಳ್ಳಲು ಸಂವಿಧಾನವನ್ನು ಅನುಸರಿಸುತ್ತಿದ್ದರೂ, ಆಚರಣೆಯಲ್ಲಿ ಮನುಸ್ಮೃತಿಯೇ ಮುನ್ನೆಲೆಗೆ ಬರುತ್ತಿರುವುದು ಎಂದು ವಿಷಾದ ವ್ಯಕ್ತಪಡಿಸಿದರು.