ದೇಶದಲ್ಲಿ ಬಾಲ್ಯವಿವಾಹ ಮುಕ್ತ ಭಾರತವನ್ನಾಗಿಸಲು ಎಲ್ಲಾ ಇಲಾಖೆ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ರಾಜ್ಯದ ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ, ರಾಯಚೂರು ಮತ್ತು ಚಾಮರಾಜನಗರ ಸೇರಿ ಐದು ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ಶೇ.99 ಮಕ್ಕಳು ಸಾಮಾಜಿಕ ಜಾಲತಾಣದ ವ್ಯಸನಿಗಳಾಗಿದ್ದು, ಖಿನ್ನತೆಗೆ ಒಳಗಾಗಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

ಗುರುವಾರ ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಎಸಿಎಲ್-ಕೆ ಸಂಯುಕ್ತಾಶ್ರಯದಲ್ಲಿ ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ 2030ರೊಳಗೆ ದೇಶದಲ್ಲಿ ಬಾಲ್ಯವಿವಾಹ ಮುಕ್ತ ಭಾರತವನ್ನಾಗಿಸಲು ಎಲ್ಲಾ ಇಲಾಖೆ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಇದ್ದು, ಅಂದರೆ ಸರಿಸುಮಾರು ಪ್ರತಿ ಜಿಲ್ಲೆಯಲ್ಲಿ 2,000 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಬಾಲ್ಯವಿವಾಹ, ಪೋಕ್ಸೋ ಪ್ರಕರಣ ಕಂಡುಬರುತ್ತಿವೆ. ಈ ಕುರಿತು ಪ್ರತಿಯೊಬ್ಬರು ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಾಲ್ಯವಿವಾಹ, ಪೋಕ್ಸೋ ಕಾಯ್ದೆಗಳ ಕುರಿತು ಅರಿವು ಹೊಂದಬೇಕಿದೆ. ಸರ್ಕಾರ, ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದು ಹೇಳಿದರು.

ಎಸ್ಪಿ ಡಾ.ಶೋಭಾರಾಣಿ, ರೀಡ್ಸ್ ಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆಗಾಗಿ ಕಾನೂನು ಪುಸ್ತಕ (2ನೇ ಆವೃತ್ತಿ) ಪುಸ್ತಕ, ಮಕ್ಕಳ ಸ್ನೇಹಿ ಕಿರುಪುಸ್ತಕ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿಕಟಪೂರ್ವ ಅಧ್ಯಕ್ಷ ಹೆಚ್.ಸಿ ರಾಘವೇಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯ ಕುರಿತು ವಿಸ್ತಾರವಾದ ಮಾಹಿತಿ ನೀಡಿದರು.

ಬಳ್ಳಾರಿ ನಗರ ಡಿವೈಎಸ್‌ಪಿ ಹಾಗೂ ಎಸ್.ಜೆ.ಪಿ.ಯು ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಚಂದ್ರಕಾಂತ ನಂದಾರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ರೀಡ್ಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಹನುಮಂತ ರೆಡ್ಡಿ, ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಸುರೇಶ್ ಸೇರಿದಂತೆ ಸಹಾಯವಾಣಿಯ ಸಂಯೋಜಕರು 1098 ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಯುವಕ-ಯುವತಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ರೀಡ್ಸ್ ಸಂಸ್ಥೆಯ ಸಂಯೋಜಕ ಕೆ.ಎಂ.ತಿಪ್ಪೇಸ್ವಾಮಿ ಸ್ವಾಗತಿಸಿ, ಕಾರ್ಯಾಗಾರ ನಿರೂಪಿಸಿದರು. ಯೋಜನಾ ವ್ಯವಸ್ಥಾಪಕಿ ಕೆ.ಸೀತಾಮಹಾಲಕ್ಷ್ಮಿ ವಂದಿಸಿದರು.