ಸಾಮಾಜಿಕ ಜಾಲತಾಣಗಳು ಸಮಾಜದ ಪಿಡುಗುಗಳು

| Published : Sep 03 2025, 01:00 AM IST

ಸಾರಾಂಶ

ರಾಮನಗರ: ಪತ್ರಿಕೋದ್ಯಮದ ಎದುರು ಸವಾಲಾಗಿ ನಿಂತಿರುವ ಸಾಮಾಜಿಕ ಜಾಲತಾಣಗಳು ಸಮಾಜ ಮತ್ತು ಸಂಸಾರದ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಒಂದರ್ಥದಲ್ಲಿ ಸಾಮಾಜಿಕ ಜಾಲತಾಣಗಳು ಸಮಾಜದ ಪಿಡುಗಿನಂತಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ರಾಮನಗರ: ಪತ್ರಿಕೋದ್ಯಮದ ಎದುರು ಸವಾಲಾಗಿ ನಿಂತಿರುವ ಸಾಮಾಜಿಕ ಜಾಲತಾಣಗಳು ಸಮಾಜ ಮತ್ತು ಸಂಸಾರದ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಒಂದರ್ಥದಲ್ಲಿ ಸಾಮಾಜಿಕ ಜಾಲತಾಣಗಳು ಸಮಾಜದ ಪಿಡುಗಿನಂತಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಿದ ಅವರು, ವಾಟ್ಸ್ ಆಪ್, ಯೂಟ್ಯೂಬ್, ಫೇಸ್ ಬುಕ್, ಎಕ್ಸ್ ಖಾತೆ, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳು ಕೆಟ್ಟ ಗ್ರಹಗಳಿಂತಿವೆ ಎಂದರು.

ಸಾಮಾಜಿಕ ಜಾಲತಾಣಗಳು ಸಮಾಜವನ್ನು ಜಾಲಾಡುತ್ತಿವೆ. ಒಬ್ಬ ಭಯೋತ್ಪಾದಕ 20ರಿಂದ 30 ಮಂದಿ ಅಮಾಯಕರನ್ನು ಬಲಿ ಪಡೆಯುತ್ತಾರೆ. ಆದರೆ, ಸಾಮಾಜಿಕ ಜಾಲತಾಣದ ಭಯೋತ್ಪಾದಕ ಇಡೀ ದೇಶ, ಸಮಾಜ, ಎಲ್ಲರ ಭಾವನೆಗಳನ್ನು ಕೊಲೆ ಮಾಡುತ್ತಾನೆ. ಇದಕ್ಕೆ ಅತ್ಯಂತ್ರ ಪಾವಿತ್ರ್ಯತೆ ಉಳ್ಳ ಶ್ರೀ ಕ್ಷೇತ್ರ ಧರ್ಮಸ್ಥಳವೇ ಸೂಕ್ತ ಉದಾಹರಣೆ ಎಂದರು.

1932ರಿಂದ ನಿರಂತರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಾ ಬಂದಿದೆ. ಆ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ, ತೇಜೋವಧೆ ನಡೆಯುತ್ತಿದೆ. ಈ ರೀತಿ ಸುಳ್ಳು ಸೃಷ್ಟಿಸುವ ಪಾತ್ರಧಾರಿಗಳು, ಸೂತ್ರಧಾರಿಗಳು ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯಲೇಬೇಕಿದೆ. ಇಂತಹ ಕೃತ್ಯಗಳನ್ನು ಸರ್ವಧರ್ಮಗಳೂ ಖಂಡಿಸಬೇಕು ಎಂದು ತಿಳಿಸಿದರು.

ವೈದ್ಯಕೀಯ ವೃತ್ತಿಯ ರೀತಿ ಪತ್ರಿಕೋದ್ಯಮ ವೃತ್ತಿಯೂ ಪವಿತ್ರ ವಾದ ವೃತ್ತಿ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ಪತ್ರಿಕೋದ್ಯಮ ಪ್ರಮುಖ ಆಧಾರ ಸ್ತಂಭ. ನಾವು ನಮ್ಮ ವೃತ್ತಿ ಧರ್ಮವನ್ನು ಪಾಲನೆ ಮಾಡಲು ಪ್ರತಿಜ್ಞೆ ಸ್ವೀಕಾರ ಮಾಡುತ್ತೇವೆ. ಕೇವಲ ಪ್ರತಿಜ್ಞೆ ಮಾಡಿದರೆ ಸಾಲದು ವೃತ್ತಿಗೆ ಬದ್ಧರಾಗಿ ಪ್ರತಿಜ್ಞಾ ವಿಧಿಯ ಸಾಲಿಗೆ ತಕ್ಕಂತೆ ನಡೆದುಕೊಂಡರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಇಂದು ವೈದ್ಯಕೀಯ, ಪತ್ರಿಕೋದ್ಯಮ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳು ವ್ಯಾಪಾರೀಕರಣಗೊಂಡಿದೆ. ಇದರಿಂದ ಯಾವ ವೃತ್ತಿಯೂ ಹೊರತಾಗಿಲ್ಲ. ವ್ಯಾಪಾರೀಕರಣ, ಆಧುನೀಕರಣ ಹಾಗೂ ಗಣಕೀಕರಣ ಎಷ್ಟೇ ಬೆಳವಣಿಗೆ ಹೊಂದಿದರು ಮನುಷ್ಯ ತನ್ನ ಅಂತರಾತ್ಮ ಮತ್ತು ಪರಮಾತ್ಮನಿಗೆ ಮೆಚ್ಚುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದಕ್ಕಾಗಿ ನಮ್ಮ ವೃತ್ತಿಯನ್ನು ಪ್ರೀತಿಸಿ, ಗೌರವಿಸಬೇಕು ಎಂದರು.

ಮಾಧ್ಯಮಗಳು ಸಮಾಜದ ಸೇತುವೆ ಆಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಗೋಡೆ ನಿರ್ಮಿಸುವ ಕೆಲಸ ಮಾಡಬಾರದು. ಸಂಘರ್ಷಕ್ಕೆ ಪ್ರೇರಣೆಯಾಗಬಲ್ಲ ಸೂಕ್ಷ್ಮ ವಿಚಾರಗಳನ್ನು ತಾಪಸಣೆ ಮಾಡಿ ಮುದ್ರಿಸುವ ಹಾಗೂ ಬಿತ್ತಿರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ವಿವಾದಾತ್ಮಕ ವಿಚಾರವನ್ನು ವೈಭವೀಕರಣ ಮಾಡಬಾರದು. ಸಮಾಜ ಹಾಗೂ ಧರ್ಮಗಳ ನಡುವೆ ಪತ್ರಿಕೋದ್ಯಮ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ವೈದ್ಯರು ಮನುಷ್ಯನ ಆರೋಗ್ಯ ಕಾಪಾಡಿದರೆ, ಪತ್ರಿಕೋದ್ಯಮ ಸಮಾಜದ ಆರೋಗ್ಯ ಕಾಪಾಡುತ್ತದೆ. ಹೀಗಾಗಿ

ಪತ್ರಿಕೋದ್ಯಮ ಜನರ ಬದುಕಿನ ಭಾಗವಾಗಿದೆ. ಆದ್ದರಿಂದ ರಾಜಕೀಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುವುದನ್ನು ನಿಲ್ಲಿಸಿ ವಿಷಯಾಧಾರಿತ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡಬೇಕಿದೆ. ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕೃಷಿಕರು, ಸಮಾಜ ಸೇವಕರು ಸೇರಿದಂತೆ ವಿವಿಧ ವಲಯಗಳ ಬಗ್ಗೆ ಪ್ರಚಾರ ಮಾಡಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಪತ್ರಿಕೋದ್ಯಮ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿತ್ತು. ಆನಂತರದ ದಿನಗಳಲ್ಲಿ ಎಲ್ಲ ರಂಗಗಳಂತೆ ಪತ್ರಿಕಾ ರಂಗವೂ ಕಲುಷಿತಗೊಂಡಿದೆ. ಬ್ಲ್ಯಾಕ್ ಮೇಲ್ ಮಾಡುವಂತಹ ಪತ್ರಕರ್ತರನ್ನು ದೂರವಿಟ್ಟು ಮೌಲ್ಯಗಳನ್ನು ಉಳಿಸಿಕೊಂಡು ಪತ್ರಿಕೋದ್ಯಮವನ್ನು ಸರಿ ದಾರಿಗೆ ಕೊಂಡೊಯ್ಯುವ ಕೆಲಸ ಆಗಬೇಕಿದೆ ಎಂದರು.

ಪತ್ರಕರ್ತರರಿಗೂ ಸ್ವಂತ ಬದುಕು ಮತ್ತು ಕುಟುಂಬ ಇದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಹೋರಾಡುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಿದೆ. ಅವರ ಕುಟುಂಬದವರ ಬೆನ್ನು ತಟ್ಟಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಪ್ರತಿಭೆ ಸಾಧಕನ ಸ್ವತ್ತಾಗಿದ್ದು, ಅದನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಎ.ಮಂಜುನಾಥ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡದಿ ಪುರಸಭೆ ಅಧ್ಯಕ್ಷ ಹರಿ ಪ್ರಸಾದ್, ವಿಪಕ್ಷ ನಾಯಕ ಸಿ.ಉಮೇಶ್, ತಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

2ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ರವರು ಸನ್ಮಾನಿಸಿದರು.