ಕ್ಷುಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ: ಆರೋಪ

| Published : Apr 18 2024, 02:21 AM IST

ಸಾರಾಂಶ

ದಂಡ ಪಾವತಿಸಲು ತಪ್ಪಿದಲ್ಲಿ ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಕಮೀಟಿಯು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ.

ಕಾರವಾರ: ನೀರನ್ನು ಹೆಚ್ಚುವರಿಯಾಗಿ ಬಳಕೆ ಮಾಡಿರುವುದಕ್ಕೆ ಊರಿನ ಪಂಚರ ಸಮಿತಿ ದಂಡ ಹಾಕಿದ್ದು, ಇದನ್ನು ಪಾವತಿಸದ ಕಾರಣ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಶಿರಸಿ ತಾಲೂಕಿನ ಕಾಳಂಗಿಯ ಗಣಪತಿ ಕಲ್ಕಟೇರ ಆರೋಪಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಊರಿನವರಾದ ಲಿಂಗರಾಜು ಎಂಬವರು ಅವರ ಸ್ವಂತ ಖರ್ಚಿನಿಂದ ಗ್ರಾಮಠಾಣಾ ಜಾಗದಲ್ಲಿ ತೋಡಿದ ಕೊಳವೆ ಬಾವಿಯ ನೀರನ್ನು ತಾವು ಹಲವಾರು ವರ್ಷದಿಂದ ಬಳಕೆ ಮಾಡಿಕೊಂಡಿದ್ದು, ಇದು ಅಕ್ರಮವೆಂದು ಹೇಳಿ ಕಳೆದ ೩- ೪ ತಿಂಗಳ ಹಿಂದೆ ಪಂಚರ ಸಮಿತಿಯು ನೀರಿನ ಬಳಕೆ ಮಾಡುವುದನ್ನು ನಿಲ್ಲಿಸಲು ಸೂಚಿಸಿದೆ. ಜತೆಗೆ ನೀರನ್ನು ಬಳಸಿಕೊಂಡಿರುವುದಕ್ಕೆ ₹೧೫ ಸಾವಿರ ದಂಡವನ್ನು ಊರಿನ ದೇವಸ್ಥಾನಕ್ಕೆ ಸಂದಾಯ ಮಾಡಬೇಕೆಂದು ಆದೇಶ ಮಾಡಿದ್ದಾರೆ ಎಂದರು.ದಂಡ ಪಾವತಿಸಲು ತಪ್ಪಿದಲ್ಲಿ ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಕಮೀಟಿಯು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಪಂಚರ ಕಮಿಟಿಯ ನಿರ್ಣಯವನ್ನು ನಾವು ಒಪ್ಪದ ಕಾರಣ ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಈ ಬಗ್ಗೆ ಊರಿನಲ್ಲಿ ಡಂಗೂರ ಸಹ ಸಾರಿಸಿದ್ದಾರೆ. ಈ ರೀತಿ ತಮ್ಮ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಬಾರದೆಂದು ತಮ್ಮ ಪರವಾಗಿ ನಿಂತವರಿಗೂ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.ಪಂಚರಿಗೂ ಕೊಳವೆ ಬಾವಿಗೂ ಸಂಬಂಧವೇ ಇಲ್ಲ. ಆದರೂ ನೀರನ್ನು ನಿಲ್ಲಿಸಿದ್ದಾರೆ. ದಂಡವನ್ನು ಹಾಕಿದ್ದಾರೆ. ಇದರಿಂದ ತಮಗೆ ಅನ್ಯಾಯವಾಗಿದ್ದು, ಊರಿನಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ದೇವಸ್ಥಾನಕ್ಕೂ ತೆರಳಲು ಆಗುತ್ತಿಲ್ಲ. ಜಿಲ್ಲಾಡಳಿತ ತಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.