ಜಾತಿ ವ್ಯವಸ್ಥೆ, ಸ್ತ್ರೀಶೋಷಣೆ, ಅಸಮಾನತೆ ತಾಂಡವ ಆಡುತ್ತಿದ್ದ 12ನೇ ಶತಮಾನದಲ್ಲೇ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ದಾರ್ಶನಿಕ ಬಸವಣ್ಣ. ಕೇವಲ ಬಾಯಲ್ಲಿ ಮಾತ್ರ ಬಸವಣ್ಣನವರ ಬಗ್ಗೆ ಮಾತನಾಡದೆ ಬಸವಣ್ಣನವರ ವಚನಗಳಂತೆ ಜೀವನ ನಡೆಸಿದರೆ ಸಮಾಜ ಸುಧಾರಣೆ ಸಾಧ್ಯ
ದಾವಣಗೆರೆ: ಜಾತಿ ವ್ಯವಸ್ಥೆ, ಸ್ತ್ರೀಶೋಷಣೆ, ಅಸಮಾನತೆ ತಾಂಡವ ಆಡುತ್ತಿದ್ದ 12ನೇ ಶತಮಾನದಲ್ಲೇ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ದಾರ್ಶನಿಕ ಬಸವಣ್ಣ. ಕೇವಲ ಬಾಯಲ್ಲಿ ಮಾತ್ರ ಬಸವಣ್ಣನವರ ಬಗ್ಗೆ ಮಾತನಾಡದೆ ಬಸವಣ್ಣನವರ ವಚನಗಳಂತೆ ಜೀವನ ನಡೆಸಿದರೆ ಸಮಾಜ ಸುಧಾರಣೆ ಸಾಧ್ಯ ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಎಂ.ವೈ.ಸತೀಶ್ ಹೇಳಿದರು.
ನಗರದ ಕೆ.ಬಿ.ಬಡಾವಣೆಯ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಈ ಜಯಂತಿ ಕೇವಲ ಜನ್ಮ ದಿನವನ್ನಾಗಿ ಆಚರಣೆ ಮಾಡುವ ದಿನವಲ್ಲ. ಬಸವಣ್ಣನವರ ಬೋಧನೆಗಳನ್ನು ಸ್ಮರಿಸುವ ದಿನ. ಮಾತ್ರವಲ್ಲದೇ ಅವರ ಆದರ್ಶ, ವಚನಗಳನ್ನು ಪಾಲನೆ ಮಾಡುವ ಮತ್ತು ಅವುಗಳನ್ನು ಅನುಸರಿಸುವ ದಿನವಾಗಿದೆ ಎಂದು ಹೇಳಿದರು.
ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ್ ಮಾತನಾಡಿ, ಬಸವಣ್ಣನವರು ಬಾಲ್ಯದಲ್ಲೇ ಜಾತಿ ಪದ್ದತಿಗೆ ವಿರೋಧ, ಪ್ರಾಣಿಹಿಂಸೆಗೆ ವಿರೋಧ, ಅದರಲ್ಲೂ ಜಾತಿಯತೆಯನ್ನು ಹೋಗಲಾಡಿಸಲು ನಿರಂತರ ಶ್ರಮ ಪಟ್ಟು ಎಲ್ಲಾ ಜಾತಿಯವರನ್ನು ಒಳಗೊಂಡ ಅನುಭವ ಮಂಟಪ ಕಟ್ಟುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಿ ಸಮಾನತೆ ಸಾರಿದರು ಎಂದರು.ದಾಜಿವ ಕೂಟದ ಪದಾಧಿಕಾರಿಗಳಾದ ರವಿಬಾಬು, ಬಿ.ಸಿಕಂದರ್, ಆರ್.ಎಸ್.ತಿಪ್ಪೇಸ್ವಾಮಿ, ಡಿ.ಎಂ.ಮಹೇಶ್, ನಿಂಗಪ್ಪ, ನಾಗರಾಜ್, ವಿನಾಯಕ ಪೂಜಾರಿ, ಮಹೇಶ್ ಕಾಶೀಪುರ, ಭಾಸ್ಕರ್, ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳಾದ ಎ.ಮಂಜುನಾಥ್ ಶಿರಮಗೊಂಡನಹಳ್ಳಿ, ಅಂತರವಳ್ಳಿ ಹಾಲೇಶಪ್ಪ ಕೊಂಡಜ್ಜಿ, ಮುರುಗೇಶ್, ಗುಂಡಗತ್ತಿ ರಾಜಣ್ಣ, ಪ್ರಕಾಶ್, ಎ.ಬಿ.ಕರಿಬಸಪ್ಪ ಶಿರಮಗೊಂಡನಹಳ್ಳಿ ಇತರರು ಇದ್ದರು.