ಶರಣರ ಕ್ರಾಂತಿಯಿಂದ ಸಮಾಜ ಸುಧಾರಣೆ: ಸಿದ್ದಗಂಗಾ ಸ್ವಾಮೀಜಿ

| Published : May 04 2025, 01:30 AM IST

ಸಾರಾಂಶ

ಹನೂರು ತಾಲೂಕಿನ ಹಲಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಗುರುಮಲ್ಲೇಶ್ವರ ಮಠವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ ಉದ್ಘಾಟನೆ ಮಾಡಿದರು.

ಹನೂರು: ಈ ನಾಡಿನಲ್ಲಿ ಬಸವಣ್ಣ, ಸಿದ್ಧಲಿಂಗೇಶ್ವರ ಮತ್ತು ಗುರುಮಲ್ಲೇಶ್ವರಂತಹ ಶರಣರು ಕ್ರಾಂತಿಕಾರಕ ಬದಲಾವಣೆ ಮೂಲಕ ಸಮಾಜ ಸುಧಾರಣೆ ಮಾಡಿದರು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು. ಹಲಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಗುರುಮಲ್ಲೇಶ್ವರ ಮಠವನ್ನು ಉದ್ಘಾಟನೆ ಮಾಡಿದರು. ಮೈಸೂರು ಭಾಗದಲ್ಲಿ ಗುರುಮಲ್ಲೇಶ್ವರರು ಬಸವಣ್ಣನವರ ಆದರ್ಶ ತತ್ವಗಳನ್ನು ಮುಂದುವರಿಸಿ ಪ್ರತಿಯೊಂದು ಮನೆಗಳನ್ನು ಮಠವನ್ನಾಗಿ ಪರಿವರ್ತಿಸಿ ಕಾಯಕದ ತತ್ವಗಳನ್ನು ಪ್ರತಿಪಾದಿಸಿದರು. ಅವರ ಜೀವನ ಪದ್ಧತಿ, ಕಾಯಕ ನಿಷ್ಠೆ, ಶ್ರದ್ಧೆ ಹಾಗೂ ದಾಸೋಹದ ಆದರ್ಶದ ಮೂಲಕ ಮೈಸೂರು ಮಹಾರಾಜರಿಗೂ ಕಾಯಕದ ಪ್ರಜ್ಞೆ ಕಲಿಸಿದ ಮಹಾ ಸಾಧಕರು ಎಂದು ಶ್ರೀಗಳು ಬಣ್ಣಿಸಿದರು. ಬಿಜೆಪಿ ಯುವ ಮುಖಂಡ ನಿಶಾಂತ್ ಮಾತನಾಡಿ‌,ಗ್ರಾಮಸ್ಥರು ಹೆಚ್ಚು ಆಸಕ್ತಿವಹಿಸಿ ಈ ಮಠವನ್ನು ಸ್ಥಾಪಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಕೂಡ ಮಠಮಾನ್ಯಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ತಮ್ಮ ಜೊತೆ ನಿರಂತರವಾಗಿ ಕೈಜೋಡಿಸುವೆ ಎಂದರು. ಈ ವೇಳೆ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚೆನ್ನಬಸವ ಮಹಾಸ್ವಾಮೀಜಿ, ದೇವನೂರು ಮಠದ ಮಹಾಂತಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಕನಕಪುರ ಮಠದ ಮುಮ್ಮಡಿ ಶಿವರುದ್ರಸ್ವಾಮೀಜಿ, ಬಂಡಳ್ಳಿಯ ಫಲಹಾರ ಪ್ರಭುದೇವಸ್ವಾಮೀಜಿ, ಚಾಮರಾಜನಗರ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಣ್ಣ, ಹಲಗಪುರ ಗೌಡ್ರುಸೋಮಣ್ಣ, ಸೇರಿದಂತೆ ಹಲವರು ಹಾಜರಿದ್ದರು.