ಭಾವೈಕ್ಯತೆ ಮತ್ತು ಸಾಮಾಜಿಕ ಸಾಮರಸ್ಯ ಸಮಾಜದ ಅಭಿವೃದ್ಧಿಗೆ ಪ್ರಮುಖ ಆಧಾರ. ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭೇದಗಳನ್ನು ಮೀರಿ ಯುವಜನರು ಒಂದಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಸಹಕಾರ ಮತ್ತು ಸಹಬಾಳ್ವೆಯ ಮೂಲಕ ಬಲಿಷ್ಠ ಸಮಾಜವನ್ನು ನಿರ್ಮಿಸಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ಯುವಜನತೆ ಕೇವಲ ವೈಯಕ್ತಿಕ ಯಶಸ್ಸಿನತ್ತ ಗಮನಹರಿಸದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯುವಕರಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣ ಹಾಗೂ ದೇಶಪ್ರೇಮವನ್ನು ಬೆಳೆಸುವ ಕಾರ್ಯಕ್ಕೆ ಸಂಘಟನೆಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.ನಗರದಲ್ಲಿರುವ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಜಿಲ್ಲಾ ಯುವ ಪರಿಷತ್ ಆಯೋಜಿಸಿದ್ದ ಜಿಲ್ಲಾ ಯುವ ಪರಿಷತ್ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಭಾವೈಕ್ಯತೆ ಮತ್ತು ಸಾಮಾಜಿಕ ಸಾಮರಸ್ಯ ಸಮಾಜದ ಅಭಿವೃದ್ಧಿಗೆ ಪ್ರಮುಖ ಆಧಾರ. ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭೇದಗಳನ್ನು ಮೀರಿ ಯುವಜನರು ಒಂದಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಸಹಕಾರ ಮತ್ತು ಸಹಬಾಳ್ವೆಯ ಮೂಲಕ ಬಲಿಷ್ಠ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.ಯುವಜನರಲ್ಲಿ ಅಪಾರವಾದ ಪ್ರತಿಭೆ ಮತ್ತು ಸಾಮರ್ಥ್ಯವಿದೆ. ಅವರಿಗೆ ಸೂಕ್ತ ಮಾರ್ಗದರ್ಶನ, ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸಿದರೆ ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಉದ್ಯಮ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯ. ಯುವಕರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಉದ್ಯೋಗ ಕ್ಷೇತ್ರದ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ತಮ್ಮ ಬೆಳವಣಿಗೆಯೊಂದಿಗೆ ಸಮಾಜದ ಬೆಳವಣಿಗೆಯನ್ನೂ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಯುವಶಕ್ತಿಯ ಸಾರ್ಥಕ ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿಪಿ ಪ್ರಕಾಶ್, ಸದಸ್ಯ ಇದ್ರಿಸ್ ಖಾನ್, ಎನ್‌ವೈಕೆ ನಿವೃತ್ತ ಉಪ ನಿರ್ದೇಶಕ ಎಸ್ ಸಿದ್ದರಾಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್, ಯುವಪರಿಷತ್ ಅಧ್ಯಕ್ಷ ಪರಮೇಶ್, ಮಾರ್ಗದರ್ಶಕ ಎಂ.ಯೋಗೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ಮಾಹಿತಿ ಹಕ್ಕು ದುರ್ಬಳಕೆ ತಡೆಗಟ್ಟಿ: ಬದ್ರುದ್ದೀನ್ಈ ದೇಶದ ಎಲ್ಲ ಸಮಸ್ಯೆಗಳ ಮೂಲ ಭ್ರಷ್ಟಾಚಾರ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬೇಕು. ಅದಕ್ಕಾಗಿ ೨೦೦೫ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು. ಇದನ್ನು ಸರಿಯಾಗಿ ಬಳಸಿಕೊಂಡರೆ ವ್ಯವಸ್ಥೆಯನ್ನು ಸುಧಾರಣೆ ಮಾಡಬಹುದು ಎಂದು ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಹೇಳಿದರು.
ಜಿಲ್ಲಾ ಯುವ ಪರಿಷತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಕೆಲವರು ಮಾಹಿತಿ ಹಕ್ಕನ್ನು ದುರ್ಬಳಕೆ ಮಾಡಿಕೊಂಡು ಬ್ಲಾಕ್‌ಮೇಲ್‌ಗೆ ಬಳಸುತ್ತಿದ್ದಾರೆ. ಇದರಿಂದ ಪಾರದರ್ಶಕ ಆಡಳಿತಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.ಇಂದಿನ ಯುವ ಪೀಳಿಗೆ ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್‌ಗೆ ದಾಸರಾಗಿದ್ದಾರೆ. ಇದು ನಿಮ್ಮನ್ನು ದಾರಿ ತಪ್ಪಿಸಬಹುದು. ಅದನ್ನು ಬಳಸಿಕೊಳ್ಳಿ, ಆದರೆ ಅದಕ್ಕೆ ಗುಲಾಮರಾಗಬೇಡಿ. ಓದುವ ಹವ್ಯಾಸ ಹೆಚ್ಚಿಸಿಕೊಳ್ಳಿ, ಪುಸ್ತಕ, ದೇಶದ ಇತಿಹಾಸ ಓದಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.